ಹೊಸದಿಲ್ಲಿ : ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ಬೆಳಗ್ಗೆ ಇಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ 100 ರೂ. ಸಂಸ್ಮರಣ ನಾಣ್ಯವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ವಾಜಪೇಯಿ ಅವರ ದೀರ್ಘಕಾಲದ ಸಹವರ್ತಿ, ಹಿರಿಯ ಬಿಜೆಪಿ ನಾಯಕ ಲಾಲಕೃಷ್ಣ ಆಡ್ವಾಣಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇತ್ಲಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಉಪಸ್ಥಿತರಿದ್ದರು.
ವಾಜಪೇಯಿ ಅವರು ಕಳೆದ ಆಗಸ್ಟ್ ನಲ್ಲಿ ದಿಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ತಮ್ಮ 93ರ ಹರೆಯದಲ್ಲಿ ದೀರ್ಘಕಾಲದ ಅಸ್ವಾಸ್ಥದ ಬಳಿಕ ನಿಧನ ಹೊಂದಿದ್ದರು.
ಮೋದಿ ಅವರು ತಮ್ಮ ಭಾಷಣದಲ್ಲಿ “ವಾಜಪೇಯಿ ಅವರ 93ನೇ ಜನ್ಮದಿನವಾದ ನಾಳೆ ಮಂಗಳವಾರ ತಾನು ಸ್ಮಾರಕಕ್ಕೆ ತೆರಳಿ ಅವರು ಹಾಕಿಕೊಟ್ಟಿರುವ ಉನ್ನತ ಧ್ಯೇಯೋದ್ದೇಶಗಳ ಪಥದಲ್ಲಿ ಮುಂದುವರಿಯುವ ತನ್ನ ಬದ್ಧತೆಯನ್ನು ಪುನರುಚ್ಚರಿಸುವುದಾಗಿ’ ಹೇಳಿದರು.
“ಅಟಲ್ ಜೀ ಅವರಿಗೆ ಪ್ರಜಾಸತ್ತೆಯ ಪರಮೋಚ್ಚವಾಗಿತ್ತು. ಅವರ ಜನಸಂಘ ಸ್ಥಾಪಿಸಿದ್ದರು. ಆದರೆ ಪ್ರಜಾಸತ್ತೆಯನ್ನು ಉಳಿಸುವ ಪರ್ವ ಕಾಲ ಬಂದಾಗ ಅವರು ಮತ್ತು ಅವರ ಸಂಗಡಿಗರು ಜನತಾ ಪಕ್ಷವನ್ನು ಸೇರಿಕೊಂಡರು. ಅದೇ ರೀತಿ ಅಧಿಕಾರದಲ್ಲಿ ಉಳಿಯಬೇಕೋ ಅಥವಾ ಧ್ಯೇಯೋದ್ದೇಶಗಳೊಂದಿಗೆ ರಾಜಿ ಮಾಡಿಕೊಳ್ಳಬೇಕೋ ಎಂಬ ಪ್ರಶ್ನೆ ಎದುರಾದಾಗ ಅವರು ಜನತಾ ಪಾರ್ಟಿ ತೊರೆದು ಬಿಜೆಪಿಯನ್ನು ರಚಿಸಿದರು’ ಎಂದು ಮೋದಿ ಹೇಳಿದರು.
“ಕೆಲವರಿಗೆ ಅಧಿಕಾರವೆಂದರೆ ಆಕ್ಸಿಜನ್. ಅದಿಲ್ಲದೆ ಅವರು ಬದುಕುವುದಿಲ್ಲ. ಆದರೆ ವಾಜಪೇಯಿ ಅವರು ತಮ್ಮ ಸುದೀರ್ಘ ರಾಜಕೀಯ ಬದುಕನ್ನು ವಿಪಕ್ಷದ ಸ್ಥಾನದಲ್ಲಿ ಕುಳಿತೇ ಕಳೆದರು ಮತ್ತು ಸದಾಕಾಲ ದೇಶದ ಹಿತಾಸಕ್ತಿಯ ಪ್ರಶ್ನೆಯನ್ನು ಎತ್ತುವಲ್ಲೇ ತೃಪ್ತಿ ಪಡೆದರು’ ಎಂದು ಮೋದಿ ಹೇಳಿದರು.