Advertisement

ಏಷ್ಯಾದಲ್ಲೇ ಅತಿ ಉದ್ದದ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ!

04:19 PM Apr 02, 2017 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚೆನಾನಿ ಮತ್ತು ನಶ್ರಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಿರ್ಮಾಣಗೊಂಡಿರುವ  ಏಷ್ಯಾದಲ್ಲೇ ಅತಿ ಉದ್ದದ ಸುರಂಗ ಮಾರ್ಗವನ್ನು ಭಾನುವಾರ  ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.

Advertisement

ಮಾರ್ಗ ಲೋಕಾರ್ಪಣೆಯ ಬಳಿಕ ತೆರದ ಜೀಪ್‌ನಲ್ಲಿ ಪ್ರಧಾನಿ ಸುರಂಗದಲ್ಲಿ ಸಂಚರಿಸಿದರು. ಈ ವೇಳೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು. 

ಎಲ್ಲಿದೆ ಸುರಂಗ ಮಾರ್ಗ?
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರ ಮತ್ತು ಜಮ್ಮು ಸಂಪರ್ಕ ಕಲ್ಪಿಸುವ ಎನ್‌ಎಚ್‌ 44ರಲ್ಲಿ ಈ ಚೆನಾನಿ ನಶ್ರಿ ಸುರಂಗ ಮಾರ್ಗ ಬರುತ್ತದೆ. ಚೆನಾನಿ ಉಧಂಪುರ ಜಿಲ್ಲೆಯಲ್ಲಿದ್ದು, ಕಾಶ್ಮೀರದ ದಕ್ಷಿಣ ತುದಿಯಾದರೆ, ನಶ್ರಿ ರಾಂಬನ್‌ ಜಿಲ್ಲೆಯಲ್ಲಿದ್ದು ಉತ್ತರ ತುದಿಯಾಗಿದೆ. ಚೆನಾನಿ ನಶ್ರಿ ಮಧ್ಯೆ 10.89 ಕಿ.ಮೀ. ಉದ್ದದ ಈ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ.

ಪ್ರಯೋಜನವೇನು?
ಚೆನಾನಿ-ನಶ್ರಿ ಸುರಂಗ ಮಾರ್ಗದಿಂದಾಗಿ 41 ಕಿ.ಮೀ. ಸುತ್ತಿ ಬಳಸಿ ಹೋಗುವುದು ತಪ್ಪುತ್ತದೆ. ಸುಮಾರು 2 ಗಂಟೆ ಸಮಯವೂ ಉಳಿತಾಯವಾಗಲಿದೆ. ವರ್ಷದ ಪೂರ್ತಿ, ದಿನದ ಇಪ್ಪತ್ನಾಲ್ಕು ತಾಸೂ ಈ ಸುರಂಗ ಮಾರ್ಗ ತೆರೆದೇ ಇರಲಿದೆ. ಇದರಿಂದ ಯಾವುದೇ ಹವಾಮಾನ ವೈಪರೀತ್ಯ ಇದ್ದಾಗ್ಯೂ ಸುಲಲಿತ ಪ್ರಯಾಣ ಸಾಧ್ಯ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿಮಪಾತದಿಂದಾಗಿ ಗುಡ್ಡಗಾಡು ಮಾರ್ಗದಲ್ಲಿ ಸಂಚಾರ ಸ್ಥಗಿತವಾಗುತ್ತಿತ್ತು. ಆದರೆ ಇನ್ನು ಸಂಚಾರ ಸುಗಮವಾಗಲಿದೆ. ಜೊತೆಗೆ ನಿತ್ಯ 27 ಲಕ್ಷ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ.

ಅತ್ಯಾಧುನಿಕ ಸೌಲಭ್ಯ
ಸುರಂಗ ಮಾರ್ಗ ವಿಶ್ವದರ್ಜೆಗೆ ಅನುಗುಣವಾಗಿ ನಿರ್ಮಿಸಲಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಸುರಕ್ಷತೆಗಳನ್ನೂ ಹೊಂದಿದೆ. ಸಮುದ್ರ ಮಟ್ಟದಿಂದ 1200 ಮೀ. ಎತ್ತರದಲ್ಲಿ ಚತುಷ್ಪಥ ಸುರಂಗ ಮಾರ್ಗವಿದ್ದು, ಏರ್‌ಟೆಲ್‌, ಐಡಿಯಾ, ಬಿಎಸ್‌ಎನ್‌ಎಲ್‌ ಮೊಬೈಲ್‌ ಸಂಪರ್ಕ ವ್ಯವಸ್ಥೆ, ಮಾರ್ಗದ ಉದ್ದಕ್ಕೂ 124 ಸೀಸಿಟೀವಿ ಕ್ಯಾಮೆರಾಗಳು, ಆಮ್ಲಜನಕ, ಗಾಳಿಯಾಡುವ ವ್ಯವಸ್ಥೆ, 24 ಗಂಟೆಯೂ ವಿದ್ಯುತ್‌ ದೀಪಗಳು, ತುರ್ತು ಕರೆ ವ್ಯವಸ್ಥೆ, ಬೆಂಕಿ ನಂದಿಸುವ ವ್ಯವಸ್ಥೆ, ಸುರಂಗ ಮಾರ್ಗಕ್ಕೆ ಅಪಾಯವಾದರೆ ಎಚ್ಚರಿಸುವ, ಗುರುತಿಸುವ ವ್ಯವಸ್ಥೆ, ಅಪಾಯದ ಸಂದರ್ಭ ಪಾ ರಾಗಲು ಪಕ್ಕದಲ್ಲೇ 9 ಮೀ. ವಿಸ್ತಾರದ ಸುರಕ್ಷತಾ ದಾರಿ, ಸ್ಮಾರ್ಟ್‌ ಟ್ರಾಫಿಕ್‌ ಕಂಟ್ರೋಲ್‌ ವ್ಯವಸ್ಥೆಯೂ ಇದರಲ್ಲಿದೆ. 

Advertisement

ಸುರಂಗ ಮಾರ್ಗಕ್ಕೆ ವೆಚ್ಚವೆಷ್ಟು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿದ ಈ ಸುರಂಗಕ್ಕೆ 2519 ಕೋಟಿ ರೂ. ವೆಚ್ಚವಾಗಿದೆ. 2011 ಮೇ.23ರಂದು ಈ ಸುರಂಗದ ಕೆಲಸ ಆರಂಭಗೊಂಡಿದ್ದು,2016 ಮೇ.20ರಂದು ಮುಕ್ತಾಯದ ಗುರಿ ಹಾಕಿಕೊಳ್ಳಲಾಗಿತ್ತು. ವಿವಿಧ ಕಾರಣಗಳಿಗಾಗಿ 9 ತಿಂಗಳು ಕಾಮಗಾರಿ ವಿಳಂಬಗೊಂಡಿದೆ. ಆದಾಗ್ಯೂ ಇದು ದಾಖಲೆ ಅವಧಿಯಲ್ಲಿ ಮುಕ್ತಾಯವಾದ ಕಾಮಗಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಶುಲ್ಕ ಕಟ್ಟಬೇಕು!
ಚೆನಾನಿ-ನಶ್ರಿ ಸುರಂಗ ಮಾರ್ಗದಲ್ಲಿ ಸಂಚರಿಸುವವರು ಶುಲ್ಕ ಕಟ್ಟಬೇಕು. ಲಘು ವಾಹನಗಳಗೆ 55 ರೂ. ದರ ವಿಧಿಸಲಾಗಿದ್ದು, ದ್ವಿಮುಖ ಸಂಚಾರಕ್ಕೆ 85 ರೂ. ದರ ವಿಧಿಸಲಾಗಿದೆ. ಮಾಸಿಕ 1870 ರೂ.ಗಳ ಪಾಸು ಕೂಡ ಲಭ್ಯ. ಇನ್ನು ಮಿನಿ ಬಸ್‌ಗೆ 90 ರೂ. ಮತ್ತು 135 ರೂ. ದ್ದು ದೊಡ್ಡ ವಾಹನಗಳಿಗೆ 90 ರೂ. ಮತ್ತು 285 ರೂ. ದರ ವಿಧಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next