ನೇಪೈಡಾ : ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಬಿಕ್ಕಟ್ಟು ತೀವ್ರಗೊಂಡಿರುವ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಮ್ಯಾನ್ಮಾರ್‌ನ ಸ್ಟೇಟ್ ಕೌನ್ಸೆಲರ್ ಆಂಗ್ ಸಾನ್ ಸೂ ಕಿ ಅವರನ್ನು ಭೇಟಿಯಾದರು.
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ದಿಶೆಯಲ್ಲಿ ಮಾತುಕತೆ ನಡೆಸಿದರು.
ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿಸ ಮಾತನಾಡಿದ ಪ್ರಧಾನಿ ಮೋದಿ ಅವರು ಪೂರ್ವದ ದೇಶಗಳೊಂದಿಗೆ ವ್ಯವಹರಿಸುವ ಭಾರತದ ನೀತಿಯಲ್ಲಿ ಮ್ಯಾನ್ಮಾರ್ ಬಹುಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.
ಮಾನ್ಮಾರ್ ಜತೆಗಿನ ವೃದ್ಧಿಸುತ್ತಿರುವ ಸಂಬಂಧಗಳು ಭಾರತದ ಮಟ್ಟಿಗೆ ಆದ್ಯತೆಯ ವಿಷಯವಾಗಿದೆ; ಮೇಲಾಗಿ ಮ್ಯಾನ್ಮಾರ್ ಭಾರತದ ಪ್ರಮುಖ ನೆರೆಯ ದೇಶವಾಗಿದೆ ಎಂದು ಮೋದಿ ಹೇಳಿದರು.
ಮ್ಯಾನ್ಮಾರ್‌ನ ಸ್ಥಿತಿಗತಿಯನ್ನು ಭಾರತ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದೆ; ಅಂತೆಯೇ ಮ್ಯಾನ್ಮಾರ್ ಅಭಿವೃದ್ಧಿಗೆ ಭಾರತ ಮಹತ್ತರ ಕಾಣಿಕೆ ನೀಡಲು ಬಯಸಿದೆ; ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವುದು ಭಾರತದ ಬೀಜಮಂತ್ರವಾಗಿದೆ ಎಂದು ಮೋದಿ ಹೇಳಿದರು.