ನವದೆಹಲಿ:ಸತತ ಕಳೆದ ಆರು ದಿನಗಳಿಂದ ಲೋಕಸಭೆಯ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ವಿಪಕ್ಷ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಜುಲೈ 27) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ವಿಪಕ್ಷಗಳು ಉಭಯ ಸದನಗಳಲ್ಲಿಯೂ ಕೋಲಾಹಲ ಎಬ್ಬಿಸುವ ಮೂಲಕ ಕಲಾಪ ಮುಂದೂಡಿಕೆಯಾಗುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತೀಯ ಆಟಗಾರನಿಗೆ ಕೋವಿಡ್ ಪಾಸಿಟಿವ್: ಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯ ರದ್ದು
ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಉದ್ದೇಶಪೂರ್ವಕವಾಗಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ವಿಪಕ್ಷಕ್ಕೆ ಚರ್ಚೆ ನಡೆಸಲು ಆಸಕ್ತಿ ಇಲ್ಲ ಹಾಗೂ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿರುವುದಾಗಿ ವರದಿ ಹೇಳಿದೆ.
ಮೂಲಗಳ ಪ್ರಕಾರ, ಭಾರತೀಯ ಜನತಾ ಪಕ್ಷದ ಸಂಸದರ ಜತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ ಅವರು, ಸಂಸತ್ ನ ಮಳೆಗಾಲದ ಅಧಿವೇಶನದ ಕಲಾಪಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿರುವುದಾಗಿ ತಿಳಿಸಿದ್ದು, ವಿಪಕ್ಷ ಕಾಂಗ್ರೆಸ್ ಪಕ್ಷದ ಬಂಡವಾಳ ಬಯಲು ಮಾಡುವಂತೆ ಸೂಚಿಸಿರುವುದಾಗಿ ಹೇಳಿದೆ.
ಕೋವಿಡ್ 19 ಕುರಿತ ಸರ್ವ ಪಕ್ಷ ಸಭೆಗೂ ಕಾಂಗ್ರೆಸ್ ಗೈರು ಹಾಜರಾಗಿದೆ. ಕೋವಿಡ್ 19 ಪರಿಸ್ಥಿತಿ ಕುರಿತ ಪರಿಶೀಲನಾ ಸಭೆಯನ್ನೂ ಕೂಡಾ ಕಾಂಗ್ರೆಸ್ ಪಕ್ಷ ಬಹಿಷ್ಕರಿಸಿತ್ತು. ಅಷ್ಟೇ ಅಲ್ಲ ಇತರ ವಿಪಕ್ಷ ಸದಸ್ಯರನ್ನೂ ತಡೆಯುತ್ತಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ನೀವು ಮಾಧ್ಯಮ ಮತ್ತು ಸಾರ್ವಜನಿಕರ ಮುಂದೆ ಬಹಿರಂಗಗೊಳಿಸಬೇಕು ಎಂದು ಪ್ರಧಾನಿ ಪಕ್ಷದ ಸಂಸದರಿಗೆ ಸಲಹೆ ನೀಡಿರುವುದಾಗಿ ವರದಿ ಹೇಳಿದೆ.