Advertisement

ಕಾಶ್ಮೀರ ವಿಚಾರ: ಟ್ರಂಪ್ ಗೆ ಫ್ರಾನ್ಸ್ ಶಾಕ್ – ಭಾರತಕ್ಕೆ ನೈತಿಕ ಬೆಂಬಲ  

10:19 AM Aug 23, 2019 | Team Udayavani |

ಪ್ಯಾರಿಸ್: ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಫ್ರಾನ್ಸ್ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮಾಕ್ರೋನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. ಜಿ7 ಶೃಂಗ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಫ್ರಾನ್ಸ್ ದೇಶದ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಪ್ಯಾರಿಸ್ ಗೆ ಆಗಮಿಸಿದ್ದಾರೆ.

Advertisement

ಮಾತುಕತೆ ಪ್ರಾರಂಭಕ್ಕೂ ಮುನ್ನ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಕಾಶ್ಮೀರ ವಿಚಾರದಲ್ಲಿ ತೃತೀಯ ದೇಶದ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮತ್ತು ಈ ಮೂಲಕ ಕಾಶ್ಮೀರ ವಿಚಾರದಲ್ಲಿ ಭಾರತದ ನಿಲುವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದಿರುವ ಪ್ರಮುಖ ದೇಶವೊಂದು ಬೆಂಬಲಿಸಿದಂತಾಗಿದ್ದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ನೈತಿಕ ಬಲ ತಂದುಕೊಟ್ಟಿದೆ.

ಇಷ್ಟು ಮಾತ್ರವಲ್ಲದೇ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿಕೊಳ್ಳಲು ತಾನು ಸಿದ್ಧ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಳಿಕೆಗೆ ಭಾರತ ಜಿ7 ದೇಶಗಳಲ್ಲಿ ಒಂದಾಗಿರುವ ಮತ್ತು ಯುರೋಪಿನ ಪ್ರಬಲ ರಾಷ್ಟ್ರದ ಮೂಲಕವೇ ಎದಿರೇಟು ನೀಡಿದಂತಾಗಿದೆ.


ಮೊದಲ ರಫೇಲ್ ಯುದ್ಧ ವಿಮಾನ ಸೆಪ್ಟಂಬರ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲಿದೆ ಎಂಬ ಭರವಸೆಯನ್ನು ಫ್ರಾನ್ಸ್ ಅಧ್ಯಕ್ಷರು ಈ ಸಂದರ್ಭದಲ್ಲಿ ನೀಡಿದರು.

ಪುಲ್ವಾಮದಲ್ಲಿ ಸಂಭವಿಸಿದ ಆ ದುರ್ಘಟನೆಯ ಕುರಿತಾಗಿ ನಮಗೆ ತೀವ್ರ ವಿಷಾದವಿದೆ ಎಂದು ಫ್ರಾನ್ಸ್ ಅಧ್ಯಕ್ಷರು ಹೇಳಿದರೆ, ಉಗ್ರವಾದದ ವಿರುದ್ಧ ನಾವಿಬ್ಬರೂ ಹೋರಾಡುತ್ತಿದ್ದೇವೆ ; ಭಯೋತ್ಪಾದನೆಯ ವಿರುದ್ದದ ಹೋರಾಟಕ್ಕೆ ಸಹಕಾರ ಕೋರುತ್ತೇವೆ ಮತ್ತು ಗಡಿಯಲ್ಲಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.

Advertisement

ರಕ್ಷಣಾ ಕ್ಷೇತ್ರದಲ್ಲಿನ ಪರಸ್ಪರ ಸಹಕಾರ ನಮ್ಮ ಸ್ನೇಹದ ಆಧಾರಸ್ತಂಭ. ರಕ್ಷಣಾ ಕ್ಷೇತ್ರದಲ್ಲಿ ನಾವು ಮಾಡಿಕೊಂಡಿರುವ ಒಪ್ಪಂದಗಳೇ ಭಯೋತ್ಪಾದನೆಯ ವಿರುದ್ಧ ನಮ್ಮ ಜಂಟಿ ಹೋರಾಟದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷರು ಇದೇ ಸಂದರ್ಭದಲ್ಲಿ ಹೇಳಿದರು.

ಜಿ7 ಶೃಂಗದಲ್ಲಿ ಭಾರತದ ಭಾಗೀದಾರಿಕೆಯನ್ನು ಇಮ್ಯಾನುವಲ್ ಬಲವಾಗಿ ಪ್ರತಿಪಾದಿಸಿದರು. ಮತ್ತು ಇದಕ್ಕಾಗಿ ಈ ಶೃಂಗದ ಆಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿರುವ ವಿಚಾರವನ್ನು ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು. ಕೆಲವೊಂದು ವಿಚಾರಗಳಲ್ಲಿ ಭಾರತದ ಭಾಗೀದಾರಿಕೆ ಇಲ್ಲದೆ ಜಿ7 ಶೃಂಗ ಅಪೂರ್ಣವಾದಂತಾಗುತ್ತದೆ ಎಂಬುದು ಫ್ರಾನ್ಸ್ ಅಧ್ಯಕ್ಷರ ಅಭಿಪ್ರಾಯವಾಗಿತ್ತು.

ಜಿ7 ಶೃಂಗದಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತೋಷದ ವಿಚಾರವಾಗಿದೆ ಮತ್ತು ಇದಕ್ಕಾಗಿ ನಾನು ಫ್ರಾನ್ಸ್ ಅಧ್ಯಕ್ಷರನ್ನು ಮತ್ತು ಫ್ರಾನ್ಸ್ ಜನತೆಯನ್ನು ಅಭಿನಂದಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

36 ರಫೇಲ್ ಯುದ್ಧ ವಿಮಾನಗಳ ಪೈಕಿ ಮುಂದಿನ ತಿಂಗಳು ಪ್ರಥಮ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರವಾಗುತ್ತಿರುವುದಕ್ಕೆ ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು. ಮತ್ತು ನಾಗರಿಕ ಅಣು ವ್ಯವಸ್ಥೆ ವಿಚಾರದಲ್ಲಿ ಭಾರತ ಒಪ್ಪಂದ ಮಾಡಿಕೊಂಡಿರುವ ಪ್ರಥಮ ದೇಶ ಪ್ರಾನ್ಸ್ ಆಗಿದೆ ಎಂಬ ವಿಚಾರವನ್ನೂ ಸಹ ನಮೋ ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next