Advertisement

ನಾನು ನಿಮ್ಮ ಭಕ್ತನಲ್ಲ: ಮೋದಿಜಿ.. ನಿಮಗೊಂದು ಪ್ರೇಮ ಪತ್ರ

09:29 AM Sep 17, 2021 | Team Udayavani |

ಮೋದಿಜಿ, ನಿಮಗೆ ಮೊದಲೇ ಹೇಳಿ ಬಿಡುತ್ತೇನೆ. ನಾನು ನಿಮ್ಮ ಪಕ್ಷದ ಸದಸ್ಯ ಅಥವಾ ಕಾರ್ಯಕರ್ತ ಅಲ್ಲ. ನಾನು ನಿಮ್ಮ ಭಕ್ತ ಅಥವಾ ಅಂಧಾಭಿಮಾನಿ ಅಲ್ಲ. ಒಬ್ಬ ಪ್ರಧಾನಿ ಆಗಿ ನಾನು ನಿಮ್ಮ ಒಬ್ಬ ಅಭಿಮಾನಿ ಅಷ್ಟೇ.

Advertisement

ನಿಮ್ಮಲ್ಲಿ ಇರುವ ನೂರಾರು ಪಾಸಿಟಿವ್ ಎನರ್ಜಿಗಳ ಬಗ್ಗೆ ನನ್ನ ವಿಕಸನ ತರಬೇತು ಕಾರ್ಯಕ್ರಮಗಳಲ್ಲಿ ಹೆಮ್ಮೆಯಿಂದ ವಿವರಿಸಿದ್ದೇನೆ.

ಹಾಗೆಂದು ನಿಮ್ಮ ಎಲ್ಲಾ ತತ್ವಗಳನ್ನು ನಾನು ಸ್ವೀಕಾರ ಮಾಡುತ್ತೇನೆ ಎಂದೇನಲ್ಲ. ಒಂದೆರಡು ವಿಷಯಗಳ ಬಗ್ಗೆ ನನ್ನಲ್ಲಿ ನಿಮ್ಮ ಬಗ್ಗೆ ವಿರೋಧ ಇದೆ. ಆದರೆ ನಿಮ್ಮ ಬದುಕಿನ ಒಳ್ಳೇದನ್ನು ಮಾತ್ರ ಪ್ರೀತಿಯಿಂದ ತೆಗೆದುಕೊಳ್ಳುವೆ.

ಅತೀ ದೀರ್ಘ ಅವಧಿಗೆ ಪ್ರಧಾನಿಯಾದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕಾರಣಕ್ಕೆ ನಾನು ನಿಮ್ಮನ್ನು ಆರಾಧನೆ ಮಾಡುವುದಿಲ್ಲ. ಪೂರ್ಣ ಬಹುಮತ ನಿಮಗೆ ಬಂದಿತು ಎನ್ನುವುದೂ ನನ್ನ ಮೆಚ್ಚುಗೆಯ ಕಾರಣ ಅಲ್ಲ. ಅತೀ ಹೆಚ್ಚು ವಿದೇಶ ಪ್ರವಾಸ ಮಾಡಿದಿರಿ ಎನ್ನುವುದು ಕೂಡ ನನ್ನನ್ನು ಇಂಪ್ರೆಸ್ ಮಾಡಿಲ್ಲ. ಆದರೂ ನಿಮ್ಮನ್ನು ಮೆಚ್ಚಲು, ಅಭಿನಂದನೆ ಮಾಡಲು, ಪ್ರೀತಿಸಲು ನನಗೆ ನೂರಾರು ಕಾರಣಗಳು ದೊರೆತಿವೆ. ಅವುಗಳಲ್ಲಿ ಕೆಲವನ್ನು ನಾನು ಇಲ್ಲಿ ತೆರೆದಿಡಬೇಕು.

ಹಿಂದೆ ಯಾವ ಪ್ರಧಾನಿ ಕೂಡ ಪಾರ್ಲಿಮೆಂಟ್ ಭವನ ಪ್ರವೇಶ ಮಾಡುವಾಗ ಮೆಟ್ಟಿಲುಗಳಿಗೆ ನಿಮ್ಮ ಹಾಗೆ ನಮಸ್ಕಾರ ಮಾಡಿರಲಿಲ್ಲ. ಪ್ರಧಾನಿ ಆಗುವ ಮೊದಲು ಅಮ್ಮನ ಮಡಿಲಲ್ಲಿ ಹೋಗಿ ಬೆಚ್ಚಗೆ ಕೂತು ಆಶೀರ್ವಾದ ತೆಗೆದುಕೊಂಡು ಬಂದಿರಿ.

Advertisement

ನಿಮ್ಮ ಪ್ರತಿಜ್ಞಾ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ದೇಶಗಳ ಅಷ್ಟೂ ಮಂದಿ ಪ್ರಧಾನಿಗಳನ್ನು ಒಟ್ಟಾಗಿ ಆಮಂತ್ರಣ ಕೊಟ್ಟು ಕರೆಸಿದ್ದು ಕೂಡ ಶ್ಲಾಘನೀಯ.

ಮೈ ನರೇಂದ್ರ ದಾಮೋದರ್ ದಾಸ್ ಮೋದಿ…… ಎಂದು ಆರಂಭವಾದ ನಿಮ್ಮ ಪ್ರತಿಜ್ಞೆಯ ವಾಕ್ಯದಲ್ಲಿ ಇಡೀ ಭಾರತವು ಭಾರೀ ಭರವಸೆಯನ್ನು ಕಂಡಿತ್ತು. ಆ ಒಂದು ಭರವಸೆಯನ್ನು ಏಳು ವರ್ಷಗಳ ಕಾಲ ಉಳಿಸಿಕೊಳ್ಳುವುದು ಭಾರೀ ದೊಡ್ಡ ಸವಾಲು! ನೀವು ಅದನ್ನು ಗೆದ್ದಿರುವಿರಿ. ಅದಕ್ಕಾಗಿ ನಿಮ್ಮನ್ನು ನಾನು ಪ್ರೀತಿಸಬೇಕು!

ನಿಮ್ಮ ಬಾಲ್ಯದಲ್ಲಿ ತೀವ್ರ ಬಡತನದ ನಡುವೆ 18ನೆಯ ವರ್ಷಕ್ಕೆ ನೀವು ಮನೆ ಬಿಟ್ಟು ಹೋದದ್ದು, ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ್ದು, ನಂತರ ಭೂಗತರಾದದ್ದು, ಆರ್ ಎಸ್ಎಸ್ ಎಂಬ ರಾಷ್ಟ್ರೀಯವಾದಿ ಸಂಘಟನೆಯಲ್ಲಿ ಬೆವರು ಹರಿಸಿದ್ದು, ಆಡ್ವಾಣಿಯವರ ರಥ ಯಾತ್ರೆಯಲ್ಲಿ ಬಹು ದೊಡ್ಡ ಹೊಣೆಯನ್ನು ಹೊತ್ತದ್ದು, ಮುಂದೆ ಗುಜರಾತ್ ಮುಖ್ಯಮಂತ್ರಿಯಾಗಿ ಭಾರತದ ಮುಂದೆ ಗುಜರಾತ್ ಮಾದರಿಯನ್ನು ತೆರೆದು ಇಟ್ಟದ್ದು…. ಇವನ್ನೆಲ್ಲ ಗಮನಿಸಿದಾಗ ಈ ವ್ಯಕ್ತಿ ಏನಾದರೂ ಒಳ್ಳೆದು ಮಾಡಿಯಾನು ಎಂಬ ನಂಬಿಕೆಯನ್ನು ಜನರಲ್ಲಿ ಬಿತ್ತಿದ್ದು ನಿಜಕ್ಕೂ ಗ್ರೇಟ್. ನೀವೊಂದು ಅದ್ಭುತ ಮಾರ್ಕೆಟಿಂಗ್ ಏಕ್ಸಿಕ್ಯುಟೀವ್ ಎಂದು ಪ್ರೀತಿಯಿಂದ ಕರೆಯುವೆ. ದಯವಿಟ್ಟು ಬೇಜಾರು ಮಾಡಬೇಡಿ.

ನೀವು ಪ್ರಧಾನಿ ಆದ ಕೂಡಲೇ ಮಹಾತ್ಮ ಗಾಂಧಿ ಅವರ ಕನಸಿನ ಯೋಜನೆಯಾದ ಸ್ವಚ್ಛ್ ಭಾರತ್ ಮಿಷನ್ ಲೀಡ್ ಮಾಡಿದ ರೀತಿ ಇದೆಯಲ್ಲಾ ಅದು ಗ್ರೇಟ್. ಸ್ವತಃ ಪ್ರಧಾನಿ ಹಿಡಿ ಸೂಡಿ ಹಿಡಿದು ಕಸವನ್ನು ಗುಡಿಸಿದ್ದು ಉತ್ತಮ ಮಾದರಿ ಆಗಿತ್ತು. ಆದರೆ ಮುಂದೆ ನಮ್ಮ ಭಾರತೀಯರ ಮರೆವು ಅಲ್ಪ ಕಾಲದ್ದು ಎಂದು ನಿಮಗೆ ಗೊತ್ತಿರಲಿಲ್ಲ. ಕ್ಷಮಿಸಿ ಬಿಡಿ ಅವರನ್ನು!

177 ರಾಷ್ಟ್ರಗಳನ್ನು ಕನ್ವಿನ್ಸ್ ಮಾಡಿ, ವಿಶ್ವ ಸಂಸ್ತೆಯ ಎದೆಯ ಮೇಲೆ ಕೂತು 2015ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡಿದ್ದು, ಸ್ವತಃ ಪ್ರಧಾನಿ ಚಾದರವನ್ನು ಹಾಸಿ ಕೂತು ನೆಲದ ಮೇಲೆ ಯೋಗಾಭ್ಯಾಸ ಮಾಡಿದ್ದು ನಿಮ್ಮ ಅಸೀಮ ಸಾಧನೆ. ನಿಮಗೆ ಭಾರತವು ಋಣಿಯಾಗಿದೆ.

2005ರಲ್ಲಿ ನೀವು ಅಮೇರಿಕನ್ ವೀಸಾ ಕೇಳಿದಾಗ ಜಾರ್ಜ್ ಬುಷ್ ಸರಕಾರ ನಿಮಗೆ ನೀಡದೆ ನಿರಾಕರಣೆ ಮಾಡಿದ್ದು, ಮುಂದೆ ನೀವು ಪ್ರಧಾನಿ ಆದಾಗ ಅದೇ ಅಮೇರಿಕನ್ ಸರಕಾರ ಬರಾಕ್ ಒಬಾಮಾ ಮೂಲಕ ನಿಮ್ಮನ್ನು ರತ್ನಗಂಬಳಿ ಹಾಸಿ ಸ್ವಾಗತ ಮಾಡಿದ್ದು ಅದ್ಭುತ! ಅದಕ್ಕಾಗಿ ನಾನು ನಿಮ್ಮನ್ನು ತುಂಬಾ ಪ್ರೀತಿ ಮಾಡಬೇಕು.

ಪಾಕ್ ಸೈನಿಕರು ಮತ್ತು ಭಯೋತ್ಪಾದಕ ಸಂಘಟನೆಯ ಸದಸ್ಯರು ನಮ್ಮ ಸೈನಿಕರ ರುಂಡಗಳನ್ನು ಚೆಂಡಾಡಿ ಹೋದಾಗಲೂ ಏನೂ ಮಾಡಲಾಗದೆ ನಮ್ಮ ಸರಕಾರಗಳು ಕೈ ಕಟ್ಟಿ ಕೂತ ಉದಾಹರಣೆ ಇತ್ತು. ಆದರೆ ಮೋದಿಜಿ ನೀವು ಪ್ರಧಾನಿಯಾಗಿ ಮಾಡಿದ ಸರ್ಜಿಕಲ್ ಸ್ಟ್ರೈಕ್ ಮೂಲಕ ಐವತ್ತಕ್ಕಿಂತ ಹೆಚ್ಚು ಪಾಕ್ ಭಯೋತ್ಪಾದಕರನ್ನು ಬೆನ್ನಟ್ಟಿ ಹೊಡೆದು ಉರುಳಿಸಿದ್ದು ನಮಗೆ ಭಾರೀ ಖುಷಿ ತಂದಿತ್ತು! ಪಾಕ್ ಸೈನಿಕರು ನಮ್ಮ ಎಲ್ ಓಸಿ ಟಚ್ ಮಾಡಲು ಕೂಡ ಹೆದರುವ ಕಾಲ ಈಗ ಬಂದಿದೆ. ಅದಕ್ಕಾಗಿ ನಿಮಗೆ ನಾವು ಋಣಿ.

ಒಂದು ರಜೆ ಕೂಡ ಮಾಡದೆ ಏಳು ವರ್ಷ ಕರ್ತವ್ಯ ಮಾಡಿದ್ದು, ನವರಾತ್ರಿ ಹೊತ್ತಲ್ಲಿ ಒಂಬತ್ತು ದಿನ ಉಪವಾಸ ಮಾಡಿದ್ದು ನಾವು ಕಂಡವರು. ನೀವು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ನೂರಾರು ದೇಶಗಳನ್ನು, ಪ್ರದೇಶಗಳನ್ನು ಸುತ್ತಿ ಬಂದರೂ ಒಮ್ಮೆ ಕೂಡ ಜ್ವರ, ಕೆಮ್ಮು, ಶೀತ ಎಂದು ಕಷ್ಟ ಪಟ್ಟದ್ದು ನಾವು ನೋಡಲೆ ಇಲ್ಲ! ಭಾರೀ ಗ್ರೇಟ್ ಮೋದಿಜಿ ನೀವು.

ಆಧುನಿಕ ಭಾರತ ನಿರ್ಮಾಣಕ್ಕೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮ, ಭಾರತದ ಅಸ್ಮಿತೆಯನ್ನು ಎತ್ತರಿಸಿದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ, 60 ಮಿಲಿಯ ಶೌಚಾಲಯಗಳನ್ನು ಗ್ರಾಮೀಣ ಮಟ್ಟದಲ್ಲಿ ಪೂರ್ತಿ ಮಾಡಿದ್ದು, ಹೆಣ್ಮಕ್ಕಳ ಕಣ್ಣೀರು ಒರೆಸುವ ಉಜ್ವಲ ಗ್ಯಾಸ್ ಸಂಪರ್ಕ ಯೋಜನೆ, 500 ಮಿಲಿಯನ್ ಭಾರತೀಯರನ್ನು ಆರೋಗ್ಯ ವಿಮೆಯ ಮೂಲಕ ತಲುಪಿದ ಆಯುಶ್ಮಾನ್ ಭಾರತ ಹೆಸರಿನ ಯೋಜನೆ, ಭಾರತೀಯ ಸಂಸ್ಕೃತಿಯ ಪ್ರತೀಕ ಆದ ಮೇಕ್ ಇನ್ ಇಂಡಿಯಾ ಶೀರ್ಷಿಕೆ, ಔಷಧಿಗಳನ್ನು ಅರ್ಧ ದರದಲ್ಲಿ ಒದಗಿಸುವ ಮೆಡಿಕಲ್ ಕೇಂದ್ರಗಳು ಇವೆಲ್ಲವೂ ನಮ್ಮ ದೇಶಕ್ಕೆ ಅತ್ಯಂತ ಅಗತ್ಯ ಆಗಿದ್ದವು. ನೀವೇ ಸ್ವತಃ ಭಾರತೀಯ ದಿರಿಸು ಧರಿಸಿ ಫ್ಯಾಶನ್ ಐಕಾನ್ ಆದದ್ದು, ಯುವ ಜನತೆಯನ್ನು ಆಕರ್ಷಣೆ ಮಾಡಿದ್ದು ಸಣ್ಣ ಸಾಧನೆ ಅಲ್ಲವೇ ಅಲ್ಲ. ನಿಮಗೆ ನಾವು ತುಂಬಾ ಅಭಿನಂದನೆ ಸಲ್ಲಿಸಬೇಕು.

2021ರ ಒಂದೇ ಒಲಿಂಪಿಕ್ಸ್ ಕೂಟದಲ್ಲಿ ಏಳು ಮೆಡಲ್, ಇದೇ ವರ್ಷ ನಡೆದ  ಪಾರಾ ಒಲಿಂಪಿಕ್ಸ್ ಕೂಟದಲ್ಲಿ 19 ಮೆಡಲಗಳ ಸಾಧನೆ! ಇದು ಆರಂಭ ಅಷ್ಟೇ ಎಂದು ನೀವು ಹೇಳಿದ್ದೀರಿ ಮೋದಿಜಿ. ಇನ್ನೇನು ಬೇಕು ನಮಗೆ ನಿಮನ್ನು ಪ್ರೀತಿ ಮಾಡಲು?

ಬೇರೆ ಯಾರೂ ಟಚ್ ಮಾಡಲು ಕೂಡ ಹೆದರುವ ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಮಾಡಿದ್ದು, ನಾಗರೀಕತೆ ಪರಿಷ್ಕರಣ ಕಾಯ್ದೆ, ತ್ರಿವಳಿ ತಲಾಕ್ ಕಾನೂನು ಇವುಗಳನ್ನು ಜಾರಿ ಮಾಡುವ ಗಟ್ಟಿ ಎದೆ ನಿಮಗೆ ಇತ್ತಲ್ಲ ಮೋದಿಜಿ? ನಿಮಗೆ ಹ್ಯಾಟ್ಸ್ ಅಪ್!

ಒಂದು ದೇಶದ ಪ್ರಧಾನಿ ನೆಲದ ಮೇಲೆ ಚಾಪೆ ಹಾಕಿ ಕೂತು ಶ್ರೀ ರಾಮ ಜನ್ಮಭೂಮಿ ದೇಗುಲದ ಶಂಕು ಸ್ಥಾಪನೆಯ ವಿಧಿಯಲ್ಲಿ ಭಾಗವಹಿಸಿದ ದೃಶ್ಯವು ಕೊಟ್ಟ ಖುಷಿಯನ್ನು ಬೇರೆ ಯಾವುದೂ ನಮಗೆ ಕೊಡಲು ಸಾಧ್ಯವೇ ಇಲ್ಲ. ಮುಂದೆ 2024ರಲ್ಲೀ ನೀವೇ ಮುಂದೆ ನಿಂತು ಶ್ರೀ ರಾಮ ಮಂದಿರದ ಉದ್ಘಾಟನೆ ನಡೆಸುತ್ತೀರಿ ಎಂಬ ನಂಬಿಕೆ ನಮಗೆ ಬಂದಿದೆ. ಅದಕ್ಕಾಗಿ ನಾವು ನಿಮಗೆ ಥ್ಯಾಂಕ್ಸ್ ಹೇಳದಿದ್ದರೆ ಹೇಗೆ?

ಒಂದು ಕಾಲದಲ್ಲಿ ಕೇಂದ್ರ ಸರ್ಕಾರವು ಒಂದು ರೂಪಾಯಿ ಬಿಡುಗಡೆ ಮಾಡಿದರೆ ಅದು ಗ್ರಾಮಕ್ಕೆ ತಲುಪುವಾಗ 15 ಪೈಸೆ ಮಾತ್ರ ತಲುಪುವುದು ಎಂದು ಒಬ್ಬರು ಪ್ರಧಾನ ಮಂತ್ರಿ ಪಾರ್ಲಿಮೆಂಟಲ್ಲಿ ಹೇಳಿದ್ದರು. ಆದರೆ ಈಗ ಸರಕಾರಿ ಅನುದಾನಗಳು, ಸಬ್ಸಿಡಿಗಳು, ರೈತ ಸಮ್ಮಾನ ಮೊದಲಾದ ನಿಧಿಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುವುದು ನೋಡುವಾಗ ಭಾರೀ ಹೆಮ್ಮೆ ನಮಗೆ. ಸ್ವತಃ ಪ್ರಧಾನಿ ಆಗಿ ನೀವು ಒಂದೇ ಒಂದು ಭ್ರಷ್ಟಾಚಾರ ಹಗರಣದ ಕಪ್ಪು ಚುಕ್ಕೆ ಇಲ್ಲದೆ ಏಳು ವರ್ಷ ಪೂರ್ತಿ ಮಾಡಿದ್ದು ಮೋದಿಜಿ, ನಮ್ಮಲ್ಲಿ ಶಬ್ದಗಳು ಇಲ್ಲ ನಿಮಗೆ ಧನ್ಯವಾದ ಹೇಳಲು! ನೀವು ನಿಜವಾಗಿಯೂ ಭಾರತದ ಭರವಸೆ. 130 ಕೋಟಿ ಜನರ ಕನಸು. ಯುವಜನತೆಯ ಆಶಾ ಕಿರಣ!

ಕೋವಿಡ್-19 ಕಾಲದಲ್ಲಿ ಕೂಡ ದೇವದೂತನ ಹಾಗೆ, ಸಂತನ ವರ್ಚಸ್ಸು ಹೊತ್ತ ನೀವು ನಡೆಸಿದ ಎಲ್ಲಾ ಪರಿಕ್ರಮಗಳು ಪ್ರತೀ ಒಬ್ಬ ಭಾರತೀಯನಿಗೆ ಇಷ್ಟ ಆಗಿವೆ. ವಿಶ್ವಕ್ಕೆ ದಾಖಲೆ ಬರೆದ ನಿಮ್ಮ ಉಚಿತ ಮತ್ತು ಸಾಮೂಹಿಕ ಕೋವಿಡ್ ಲಸಿಕೆಯ ಸರಣಿ ಕಾರ್ಯಕ್ರಮ ನಿಜಕ್ಕೂ ಅನ್ಯತ್ರ ದುರ್ಲಭ ಎಂದೇ ನಾನು ಭಾವಿಸುತ್ತೇನೆ.

ಮೋದಿಜಿ, ನಿಮ್ಮನ್ನು ಇಂದಿಗೂ ಟೀಕೆ ಮಾಡುವ ವಿರೋಧಿಗಳು ಇದ್ದಾರೆ. ಅವರ ಟೀಕೆಗಳಿಗೆ ಒಂದಿಷ್ಟೂ ವಿಚಲಿತರಾಗದೆ, ಅವರಿಗೆ ಯಾವ ಉತ್ತರವನ್ನೂ ಕೊಡದೆ, ಅವರಿಗೆ ನಿಮ್ಮ ಕೆಲಸಗಳ ಮೂಲಕವೇ ಉತ್ತರ ಕೊಡುವ, ನಿಮ್ಮ ಮಾತಿಗಿಂತ ಹೆಚ್ಚು ಪವರಫುಲ್ ಆದ ನಿಮ್ಮ ಮೌನದ ಬಗ್ಗೆ ವಿಸ್ಮಯ ಪಡುವ ನಾವು ನಿಮ್ಮ ಬಗ್ಗೆ ನಿಜವಾಗಿಯೂ ಅಭಿಮಾನ ಪಡುತ್ತೇವೆ.

ನಿಮ್ಮಲ್ಲಿ ಅಂತರ್ಗತವಾದ ಯಾವುದೋ ಅಗೋಚರ ಶಕ್ತಿಯು ನಿಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿದೆ ಎಂದು ನಮ್ಮ ಅನಿಸಿಕೆ. ನಿಮಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಮೋದಿಜಿ. ಲವ್ ಯು ಆಲ್ವೇಸ್.

ಹಾಗೆಯೇ ಇಂದು ನಿಮಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಾರತ ವಿಶ್ವ ಗುರು ಆಗುವ ಕನಸಿನ ಜೊತೆಗೆ ನಾವು ನಿಮ್ಮನ್ನು ಪ್ರೀತಿ ಮಾಡುತ್ತೇವೆ ಮೋದಿಜಿ. ನಿಮಗೆ ನಮ್ಮ ಧನ್ಯವಾದಗಳು.

ಹೀಗೇ ನಮ್ಮಂತೆ ಭಾರತವನ್ನು ಪ್ರೀತಿಸುವ ಜನರಿಗೆ ಪ್ರೇರಣೆಯಾಗಿ, ಐಕಾನ್ ಆಗಿ ಇದ್ದು ಬಿಡಿ ಮೋದಿಜಿ. ಲವ್ ಯು ಮೋದಿಜಿ.

ರಾಜೇಂದ್ರ ಭಟ್ ಕೆ,

ರಾಷ್ಟ್ರಮಟ್ಟದ ವಿಕಸನ ತರಬೇತುದಾರರು ಮತ್ತು ಲೇಖಕರು.

Advertisement

Udayavani is now on Telegram. Click here to join our channel and stay updated with the latest news.

Next