Advertisement

ಅಮೆರಿಕಕ್ಕೆ PM ಮೋದಿ ಅಧಿಕೃತ ಪ್ರವಾಸ: ಏನಿದರ ಮಹತ್ವ?

11:29 PM May 24, 2023 | Team Udayavani |

ಜೂನ್‌ 21ರಿಂದ 24ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದರೆ ಅಲ್ಲಿನ ಅಧ್ಯಕ್ಷರ ಅಧಿಕೃತ ಆಹ್ವಾನದ ಮೇರೆಗೆ ಮೋದಿ ತೆರಳುತ್ತಿದ್ದಾರೆ. ಈಗಾಗಲೇ ಮೋದಿಯವರು ಹಲವಾರು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ, ಇದರಲ್ಲೇನು ವಿಶೇಷ ಎಂದು ಭಾವಿಸಬಹುದು. ಆದರೆ ಬೇರೆ ಅವಧಿಯ ಭೇಟಿಗೂ, ಈ ಭೇಟಿಗೂ ಅಜಗಜಾಂತರವಿದೆ.

Advertisement

ಏನಿದು ಸ್ಟೇಟ್‌ ವಿಸಿಟ್‌?

ಅಮೆರಿಕ ಅಧ್ಯಕ್ಷರ ಅಧಿಕೃತ ಆಹ್ವಾನದ ಮೇರೆಗೆ ಯಾವುದಾದರೊಂದು ದೇಶದ ಮುಖ್ಯಸ್ಥರು ಅಮೆರಿಕಕ್ಕೆ ಅಧಿಕೃತವಾಗಿ ಪ್ರವಾಸ ಕೈಗೊಳ್ಳುವುದು. ಇದೊಂದು ರೀತಿಯಲ್ಲಿ ಬೇರೊಂದು ದೇಶದ ಮುಖ್ಯಸ್ಥರಿಗೆ ನೀಡುವ ಅತ್ಯುನ್ನತ ಗೌರವ. ವಿಶೇಷವೆಂದರೆ, ಅಮೆರಿಕ ಅಧ್ಯಕ್ಷರು ತಮ್ಮ 4 ವರ್ಷಗಳ ಅಧಿಕಾರಾವಧಿಯಲ್ಲಿ ಒಮ್ಮೆ ಮಾತ್ರ ವಿದೇಶಿ ಮುಖ್ಯಸ್ಥರಿಗೆ ಇಂಥ ಆಹ್ವಾನ ನೀಡಬಹುದು. ಈ ಬಾರಿ ಜೋ ಬೈಡೆನ್‌ ಅವರು ಮೋದಿಯವರಿಗೆ ನೀಡಿದ್ದಾರೆ. ಈ ಹಿಂದೆ ಬರಾಕ್‌ ಒಬಾಮಾ ಅವರು ಡಾ| ಮನಮೋಹನ್‌ ಸಿಂಗ್‌ ಅವರಿಗೆ ಇಂಥ ಗೌರವ ನೀಡಿದ್ದರು.

ಹೇಗಿರುತ್ತೆ ಈ ಭೇಟಿ?

  1. ವಿಮಾನ ನಿಲ್ದಾಣದಲ್ಲಿ ವಿಶೇಷ ರೀತಿಯ ಸ್ವಾಗತ
  2. ಶ್ವೇತಭವನಕ್ಕೆ ತೆರಳಿದಾಗ 21ಸುತ್ತು ಗನ್‌ ಸೆಲ್ಯೂಟ್‌
  1. ದಿ ಸ್ಟೇಟ್‌ ಡಿನ್ನರ್‌(ಶ್ವೇತಭವನದಲ್ಲಿ ಏರ್ಪಡಿಸಲಾಗುವ ವಿಶೇಷ ಔತಣಕೂಟ)
  1. ರಾಜತಾಂತ್ರಿಕ ಕೊಡುಗೆಗಳ ಪರಸ್ಪರ ವಿನಿಮಯ
  2. ಅಧ್ಯಕ್ಷರ ಗೆಸ್ಟ್‌ ಹೌಸ್‌ ಬ್ಲೇರ್‌ ಹೌಸ್‌ನಲ್ಲಿ ವಾಸ್ತವ್ಯ
  3. ರಸ್ತೆಗಳ ಎರಡು ಬದಿಯಲ್ಲಿ ಧ್ವಜಗಳ ಹಾರಾಟ

ಈ ಭೇಟಿಗಳಿಂದ ಏನು ಪ್ರಯೋಜನ?

Advertisement

ಸಾಮಾನ್ಯವಾಗಿ ವರ್ಕಿಂಗ್‌ ವಿಸಿಟ್‌ ಮತ್ತು ಸ್ಟೇಟ್‌ ವಿಸಿಟ್‌ ಸಂದರ್ಭದಲ್ಲಿ ಎರಡೂ ದೇಶಗಳ ಸಂಬಂಧ ಹೆಚ್ಚಾಗಿ ಸುಧಾರಣೆಯಾಗುತ್ತದೆ. ಅಲ್ಲದೆ ಈ ಮೂಲಕ ಅಮೆರಿಕವು, ಆಹ್ವಾನ ನೀಡಿದ ದೇಶಕ್ಕೆ ನೀಡುವ ದೊಡ್ಡ ಗೌರವ ಎಂದು ಬಣ್ಣಿಸಲಾಗುತ್ತದೆ.

ಅಮೆರಿಕದ ವಿವಿಧ ಭೇಟಿಯ ವಿವರಗಳು

  1. ಅಧಿಕೃತ ಭೇಟಿ: ಅಮೆರಿಕ ಅಧ್ಯಕ್ಷರ ಅಧಿಕೃತ ಆಹ್ವಾನದ ಮೇರೆಗೆ ನೀಡಲಾಗುವ ಭೇಟಿ
  2. ಅಧಿಕೃತ ಕಾರ್ಯನಿಮಿತ್ತ ಭೇಟಿ: ಈ ಸಂದರ್ಭದಲ್ಲಿ ಬ್ಲೇರ್‌ ಹೌಸ್‌ನಲ್ಲಿ ಉಳಿದುಕೊಳ್ಳಲು ಆಹ್ವಾನ ನೀಡಲಾಗುತ್ತದೆ. ಜತೆಗೆ ಅಮೆರಿಕ ಅಧ್ಯಕ್ಷರ ಭೇಟಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಶ್ವೇತಭವನದಲ್ಲಿ ಅಧ್ಯಕ್ಷರು ಮತ್ತು ವಿದೇಶಾಂಗ ಕಾರ್ಯದರ್ಶಿ ಜತೆಗೆ ಭೋಜನ ಕೂಟವನ್ನು ವ್ಯವಸ್ಥೆ ಮಾಡಬಹುದು. ಈ ಭೇಟಿ ವೇಳೆಗೆ ಡಿನ್ನರ್‌ ಇರಬಹುದು ಅಥವಾ ಇರದಿರಬಹುದು. ಆಗಮನ ಮತ್ತು ನಿರ್ಗಮನದ ವೇಳೆ ಯಾವುದೇ ರೀತಿಯ ವಿಶೇಷತೆಗಳಿರುವುದಿಲ್ಲ. ಇಲ್ಲಿ ಕೊಡುಗೆಗಳನ್ನು ಹಸ್ತಾಂತರ ಮಾಡಿಕೊಳ್ಳುವಂತಿಲ್ಲ. ಮಧ್ಯಾಹ್ನದ ಭೋಜನದ ವೇಳೆ, ಮುಖ್ಯಸ್ಥರ ಪತ್ನಿಯರಿಗೆ ಆಹ್ವಾನವಿರುವುದಿಲ್ಲ.
  3. ವರ್ಕಿಂಗ್‌ ವಿಸಿಟ್‌: ಈ ಭೇಟಿ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರ ಜತೆಗೆ ಶ್ವೇತಭವನದಲ್ಲಿ ಮಾತುಕತೆ ನಡೆಸಬಹುದು. ಬೇರಾವ ಇತರ ಕಾರ್ಯಕಲಾಪಗಳು ಇರುವುದಿಲ್ಲ.
  4. ಖಾಸಗಿ ಭೇಟಿ: ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರ ಆಹ್ವಾನವಿರುವುದಿಲ್ಲ. ಬೇರೊಂದು ದೇಶದ ಮುಖ್ಯಸ್ಥರು ಖಾಸಗಿಯಾಗಿ ಭೇಟಿ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರ ಭೇಟಿಗೆ ಮನವಿ ಮಾಡಬೇಕಾಗುತ್ತದೆ. ಸಮಯವಿದ್ದರೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ.

ಭಾರತೀಯ ನಾಯಕರ ಸ್ಟೇಟ್‌ ವಿಸಿಟ್‌

ಪ್ರಧಾನಿ ನರೇಂದ್ರ ಮೋದಿಯವರಿಗೂ ಮುನ್ನ ಇಬ್ಬರು ಭಾರತೀಯ ನಾಯಕರಿಗೆ ಈ ಸ್ಟೇಟ್‌ ವಿಸಿಟ್‌ನ ಗೌರವ ಸಿಕ್ಕಿದೆ. ಜಾನ್‌ ಎಫ್. ಕೆನಡಿ ಅವರು ಅಧ್ಯಕ್ಷರಾಗಿದ್ದ ವೇಳೆ, ಭಾರತದ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಈ ಸ್ಟೇಟ್‌ ವಿಸಿಟ್‌ ಗೌರವ ನೀಡಲಾಗಿತ್ತು. ಆ ವೇಳೆ ಅವರು ವರ್ಜೀನಿಯಾ, ಪೆನ್ಯುಸಲ್ವೇನಿಯಾ, ಫ್ಲೋರಿಡಾ, ಕೋಲೋರಾಡೋ, ಲಾಸ್‌ ಏಂಜಲೀಸ್‌ ಮತ್ತು ನ್ಯೂಯಾರ್ಕ್‌ ಸಿಟಿಗೆ ಭೇಟಿ ನೀಡಿದ್ದರು. 2009ರಲ್ಲಿ ಬರಾಕ್‌ ಒಬಾಮಾ ಅವರು ಆಗಿನ ಭಾರತ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರಿಗೆ ಸ್ಟೇಟ್‌ ವಿಸಿಟ್‌ ಗೌರವ ನೀಡಿದ್ದರು. ಆಗ ಸಿಂಗ್‌ ಅವರು ಪತ್ನಿ ಗುರುಶರಣ್‌ ಕೌರ್‌ ಅವರೊಂದಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು.

ಏಕೆ ಈಗ ಈ ಭೇಟಿಗೆ ಮಹತ್ವ?

ಒಂದು ಕಡೆ ರಷ್ಯಾ ಮತ್ತು ಉಕ್ರೇನ್‌ ಸಂಘರ್ಷ, ಇನ್ನೊಂದು ಕಡೆಯಲ್ಲಿ ಇಂಡೋ-ಫೆಸಿಫಿಕ್‌ ಭಾಗದಲ್ಲಿ ಚೀನದ ಪ್ರಾಬಲ್ಯ… ಈ ಎರಡನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಅಮೆರಿಕಕ್ಕೆ ಭಾರತದಂಥ ಸಮರ್ಥ ದೇಶದ ಗಾಢ ಸ್ನೇಹ ಬೇಕಾಗಿದೆ. ಸದ್ಯಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಒಂದು ಚೀನ ಅಧ್ಯಕ್ಷರು ಹೇಳಬೇಕು ಅಥವಾ ಪ್ರಧಾನಿ ನರೇಂದ್ರ ಮೋದಿಯವರೇ ಮಧ್ಯಸ್ಥಿಕೆ ವಹಿಸಬೇಕು. ಹೀಗಾಗಿ ಉಕ್ರೇನ್‌ ಮತ್ತು ರಷ್ಯಾ ನಡುವೆ ಕದನ ವಿರಾಮ ಘೋಷಣೆಯಾಗಬೇಕು ಎಂದಾದರೆ ಮೋದಿಯವರು ಮಧ್ಯಸ್ಥಿಕೆ ವಹಿಸಲೇಬೇಕಾದ ಸ್ಥಿತಿ ಎದುರಾಬಹುದು. ಏಕೆಂದರೆ ಪಾಶ್ಚಾತ್ಯ ದೇಶಗಳು ಚೀನವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ.  ಇನ್ನು ಇಂಡೋ-ಫೆಸಿಫಿಕ್‌ ಭಾಗದಲ್ಲಿ ಚೀನದ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳು ಸೇರಿ ಕ್ವಾಡ್‌ ಅನ್ನು ಮಾಡಿಕೊಂಡಿವೆ. ಇದರ ಪ್ರಮುಖ ಉದ್ದೇಶವೇ ಚೀನದ ಪ್ರಾಬಲ್ಯ ಕಡಿಮೆ ಮಾಡುವುದು. ಈಗ ಭಾರತಕ್ಕೆ ಆಪ್ತ ಸ್ನೇಹಿತನ ಸ್ಥಾನ ಕೊಟ್ಟು, ಚೀನಕ್ಕೆ ಪರೋಕ್ಷ ಸಂದೇಶ ರವಾನಿಸಬಹುದು.

ಪ್ರಧಾನಿ ಮೋದಿ ವಿದೇಶ ಪ್ರವಾಸದ ಹೆಗ್ಗಳಿಕೆಗಳು

ಅಮೆರಿಕದ ಸ್ಟೇಟ್‌ ವಿಸಿಟ್‌ ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರು, ಭಾರತೀಯ ನಾಯಕರು ಹೋಗದೇ ಇರುವ ಅನೇಕ ದೇಶಗಳಿಗೆ ಹೋಗಿದ್ದಾರೆ.  ಮಂಗೋಲಿಯಾ, ಇಸ್ರೇಲ್‌, ಪಪುವಾ ನ್ಯೂಗಿನಿ ದೇಶಗಳಿಗೆ ಇದುವರೆಗೆ ದೇಶದ ಯಾವುದೇ ಅತ್ಯುನ್ನತ ನಾಯಕರು ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೋಗಿ ಬಂದಿದ್ದಾರೆ. ಇನ್ನು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಐರ್ಲೆಂಡ್‌ಗೆ ಹೋಗಿದ್ದಾರೆ. 1956ರಲ್ಲಿ ಆಗಿನ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರು ಹೋಗಿದ್ದರು.

42 ವರ್ಷಗಳಲ್ಲೇ ಕೆನಡಾಕ್ಕೆ ಯಾವುದೇ ಪ್ರಧಾನಿ ಹೋಗಿರಲಿಲ್ಲ. 1973ರಲ್ಲಿ ಇಂದಿರಾ ಗಾಂಧಿಯವರು ಹೋಗಿದ್ದರು. ಈಗ ನರೇಂದ್ರ ಮೋದಿಯವರು ಭೇಟಿ ನೀಡಿದ್ದರು. ಯುನೈಟೆಡ್‌ ಅರಬ್‌ ಎಮಿರೈಟ್ಸ್‌ಗೂ 34 ವರ್ಷಗಳಲ್ಲೇ ಮೊದಲ ಬಾರಿಗೆ ಹೋಗಿದ್ದಾರೆ. ಇಲ್ಲಿಗೂ 1981ರಲ್ಲಿ ಇಂದಿರಾ ಗಾಂಧಿ ಹೋಗಿದ್ದರು. 33 ವರ್ಷಗಳಲ್ಲೇ ಮೊದಲ ಬಾರಿಗೆ ಸಿಯಾಚಿಲ್ಸ್‌ ಮತ್ತು ಫಿಜಿಗೂ ಭಾರತದ ಪ್ರಧಾನಿಯೊಬ್ಬರು ಹೋಗಿ ಬಂದರು. ಹಾಗೆಯೇ ಆಸ್ಟ್ರೇಲಿಯಾ, ಶ್ರೀಲಂಕಾ ದೇಶಗಳಿಗೂ ಹಲವಾರು ವರ್ಷಗಳ ಅನಂತರ ಮೋದಿ ಪ್ರಯಾಣಿಸಿದ್ದರು. ನೇಪಾಲಕ್ಕೆ 17 ವರ್ಷಗಳ ಬಳಿಕ ಇಂಗ್ಲೆಂಡ್‌ಗೆ ದಶಕದ ಬಳಿಕ ಮೋದಿ ಹೋಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next