ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟವನ್ನು ವಿಸ್ತರಿಸಿ 36 ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಒಟ್ಟು ಕೇಂದ್ರ ಸಂಪುಟದ ಸಚಿವರ ಸಂಖ್ಯೆ 78ಕ್ಕೆ ಏರಿಕೆಯಾಗಿತ್ತು. ಇದರಲ್ಲಿ 33 ಸಚಿವರ ವಿರುದ್ಧ (ಶೇ.42) ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಎಡಿಆರ್ ತಿಳಿಸಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ-ಅನಂತ್ ನಾಗ್ ; ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆ
24 ಸಚಿವರು ಕ್ರಿಮಿನಲ್ ಪ್ರಕರಣಗಳಲ್ಲಿ ಕೊಲೆ, ಕೊಲೆ ಯತ್ನ ಮತ್ತು ದರೋಡೆಯಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ವಿವರಿಸಿದೆ. ಸಚಿವರು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿತ್ ಅನ್ನು ಆಧರಿಸಿ ಈ ವಿವರ ಕಲೆ ಹಾಕಲಾಗಿದೆ ಎಂದು ಎಡಿಆರ್ ತಿಳಿಸಿದೆ.
ವಿಶ್ಲೇಷಣೆಯಲ್ಲಿ, ಕೇಂದ್ರ ಸಚಿವ ಸಂಪುಟದಲ್ಲಿರುವ ಶೇ.90ರಷ್ಟು (70 ಸಚಿವರು) ಸದಸ್ಯರು ಕೋಟ್ಯಧೀಶ್ವರರಾಗಿದ್ದಾರೆ. ಇವರೆಲ್ಲಾ ತಮ್ಮ ಅಫಿಡವಿತ್ ನಲ್ಲಿ ಒಂದು ಕೋಟಿಗಿಂತಲೂ ಅಧಿಕ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ. ನಾಲ್ವರು ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ 379 ಕೋಟಿ, ಪಿಯೂಷ್ ಗೊಯಲ್ 95 ಕೋಟಿ, ನಾರಾಯಣ್ ರಾಣೆ 87 ಕೋಟಿ, ರಾಜೀವ್ ಚಂದ್ರಶೇಖರ್ 64 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ವಿವರಿಸಿದೆ.
ಪ್ರತಿ ಸಚಿವರಿಗೆ ಸರಾಸರಿ 16.24 ಕೋಟಿ ರೂ. ಆಸ್ತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ ಆಸ್ತಿ ಹೊಂದಿರುವವರಲ್ಲಿ ತ್ರಿಪುರಾದ ಪ್ರತಿಮಾ ಭೂಮಿಕ್ (ಆರು ಲಕ್ಷ), ಪಶ್ಚಿಮಬಂಗಾಳದ ಜಾನ್ ಬಾರ್ಲಾ (14 ಲಕ್ಷ), ರಾಜಸ್ಥಾನದಿಂದ ಕೈಲಾಶ್ ಚೌಧರಿ 24 ಲಕ್ಷ ಮತ್ತು ಮಹಾರಾಷ್ಟ್ರದ ವಿ.ಮುರಳಿಧರನ್ 27 ಲಕ್ಷ ರೂಪಾಯಿ ಆಸ್ತಿ ಇದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ.