ಅಹಮದಾಬಾದ್ : ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದ ಚುನಾವಣಾ ಪ್ರಚಾರ ಕೊನೆಯ ಹಂತದ ಕಸರತ್ತು ತೀವ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸಂಜೆ “ಅತಿದೊಡ್ಡ ಮತ್ತು ಸುದೀರ್ಘ” ರೋಡ್ಶೋ ನಡೆಸಿದರು.
ಅಂದಾಜಿನ ಪ್ರಕಾರ ಜನಸಾಗರವೇ ಹರಿದು ಬಂದ ರೋಡ್ ಶೋ ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ತವರು ರಾಜ್ಯದಲ್ಲಿ ಪ್ರಧಾನಿ ಮೋದಿಯವರು ಸುಮಾರು 50 ಕಿ.ಮೀ ನಷ್ಟು ದೂರ ಭರ್ಜರಿ ರೋಡ್ ಶೋ ನಡೆಸಿ ಮತದಾರರ ಗಮನ ಸೆಳೆದರು. ರೋಡ್ ಶೋ ಅಹಮದಾಬಾದ್ ನ 13 ವಿಧಾನ ಸಭಾ ಕ್ಷೇತ್ರಗಳು ಮತ್ತು ಗಾಂಧಿನಗರದ ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಿತು.
ನರೋಡಾ ಗಾಮ್ ನಲ್ಲಿ ಆರಂಭವಾದ ಮೆಗಾ ರೋಡ್ ಶೋ ಗಾಂಧಿನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿಯಾಗಿ ಮುಕ್ತಾಯವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಪಾರ ಜನಸಮೂಹ, ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ರೋಡ್ ಶೋ ನಲ್ಲಿ ಪಕ್ಷದ ಧ್ವಜಗಳನ್ನು ಹಿಡಿದು ಮೋದಿ…ಮೋದಿ…ಎಂಬ ಘೋಷಣೆಗಳನ್ನು ಮೊಳಗಿಸಿದರು. ಪ್ರಧಾನಿ ಮೋದಿ ಅವರು ನಿರಂತರವಾಗಿ ಜನ ಸಮೂಹದತ್ತ ಕೈಬೀಸಿ ಹೊಸ ಹುರುಪು ತೋರಿಸಿದರು.
ಸುಮಾರು 4 ಗಂಟೆಗೂ ಹೆಚ್ಚು ಕಾಲ ನಡೆದ ಸುದೀರ್ಘ ರೋಡ್ ಶೋ ವೇಳೆ ಕಟ್ಟಡಗಳ ಮೇಲೂ ವ್ಯಾಪಕ ಜನ ಸಮೂಹ ಸೇರಿತ್ತು. ಡಿ.5 ರಂದು 93 ವಿಧಾನ ಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮಾತಾದಾನ ನಡೆಯಲಿದೆ.