Advertisement

Ahmedabad: ದೇಶ ವಿರೋಧಿಗಳಿಂದ ಸಮಾಜ ವಿಭಜಿಸಲು ಯತ್ನ: ಮೋದಿ ವಾಗ್ಧಾಳಿ

10:23 PM Nov 11, 2024 | Team Udayavani |

ಅಹಮದಾಬಾದ್‌:ಕೆಲ ದೇಶ ವಿರೋಧಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು ಜನರು ಅವರ ಉದ್ದೇಶದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಒಗ್ಗಟ್ಟಾಗಿ ಸೋಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ದೇಶ ವ್ಯಾಪಿ ಜಾತಿ ಗಣತಿ ನಡೆಸಬೇಕು ಎಂಬ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸುತ್ತಿರುವಂತೆಯೇ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.

Advertisement

ಗುಜರಾತ್‌ನ ವಡ್ತಾಲ್‌ನಲ್ಲಿ ಶ್ರೀ ಸ್ವಾಮಿ ನಾರಾಯಣ ದೇಗುಲದ 200ನೇ ವಾರ್ಷಿಕೋತ್ಸವದಲ್ಲಿ ಸೇರಿದ ಭಕ್ತರನ್ನು ಉದ್ದೇಶಿಸಿ ವಚ್ಯುವಲ್‌ ಮೂಲಕ ಮಾತನಾಡಿದ ಪ್ರಧಾನಿ, “2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಒಗ್ಗಟ್ಟು ಮತ್ತು ಐಕ್ಯತೆ ಅಗತ್ಯ. ಆದರೆ ಕೆಲವರು ಸಮಾಜವನ್ನು ಜಾತಿ, ಧರ್ಮ, ಭಾಷೆ, ಹಳ್ಳಿ-ನಗರದ ಸಾಲಿನಲ್ಲಿ ತಮ್ಮ ಸ್ವಹಿತಾಸಕ್ತಿಗಾಗಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವರ ಸಂಕುಚಿ ಮನೋಭಾವ ಕೂಡ ಕಾರಣ. ಆದರೆ, ನಾವು ಇದಕ್ಕೆ ಅವಕಾಶ ನೀಡದೆ ಅವರನ್ನು ಸೋಲಿಸಬೇಕು ಎಂದು ಹೇಳಿದ್ದಾರೆ. ಸ್ವಾಮಿ ನಾರಾಯಣ ಪಂಥದ ಸಂತರು, ನಾಗರಿಕರು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸಲು ಪಣ ತೊಡಬೇಕು ಎಂದು ಕರೆ ನೀಡಿದ್ದಾರೆ. ದೇಶವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮೊದಲು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

ಜಾರ್ಖಂಡ್‌ ಮತ್ತು ಮಹಾರಾಷ್ಟ್ರಗಳಲ್ಲಿ ವಿಧಾನಸಭೆ ಚುನಾವಣಾ ರ್‍ಯಾಲಿಗಳಲ್ಲಿ ಮಾತನಾಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳು ಸಮಾಜವನ್ನು ಜಾತಿ ಆಧರಿತವಾಗಿ ಒಡೆಯಲು ಮುಂದಾಗಿವೆ ಎಂದು ಆರೋಪಿಸಿದ್ದರು. ಹೀಗಾಗಿಯೇ ಅವರು “ಒಂದಾಗಿದ್ದರೆ ಎಲ್ಲರೂ ಸುರಕ್ಷಿತರಾಗಿರುತ್ತಾರೆ’ ಎಂಬ ಘೋಷ ವಾಕ್ಯವನ್ನು ಪ್ರಚಾರದ ವೇಳೆ ಪ್ರಸ್ತಾಪಿಸಿದ್ದರು.

ಮೋದಿ ಹೇಳಿದ್ದೇನು?
– 2047ಕ್ಕೆ ದೇಶ ಅಭಿವೃದ್ಧಿ ಹೊಂದಲು ಎಲ್ಲರ ಒಗ್ಗಟ್ಟು ಅಗತ್ಯ
– ಕೆಲವರಿಂದ ಸ್ವಹಿತಾಸಕ್ತಿಗಾಗಿ ದೇಶ ವಿಭಜಿಸಲು ಯತ್ನ
– ಸಂಕುಚಿತ ಮನೋಭಾವನೆ ಕೂಡ ಇಂಥ ಪ್ರಯತ್ನಗಳಿಗೆ ಕಾರಣ
– ಹೀಗಾಗಿ ನಾಗರಿಕರು ಎಚ್ಚರಿಕೆಯಿಂದ ಇರಬೇಕು
– ದೇಶ ಸ್ವಾವಲಂಬನೆ ಸಾಧಿಸಲು ಎಲ್ಲರ ಸಹಕಾರ ಅಗತ್ಯ

Advertisement

Udayavani is now on Telegram. Click here to join our channel and stay updated with the latest news.

Next