ಜಕಾರ್ತಾ: ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾದ ಶಕ್ತಿ ವೃದ್ಧಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಬಂದರು ಅಭಿವೃದ್ಧಿಪಡಿಸಲು ಭಾರತ ಮತ್ತು ಇಂಡೋನೇಷ್ಯಾ ಒಪ್ಪಿಗೆ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೊಕೋ ವಿದೊದೊ ನಡುವಿನ ಮಾತುಕತೆ ವೇಳೆ ಬುಧವಾರ ಜಕಾರ್ತಾದಲ್ಲಿ ಈ ಅಂಶಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದರ ಜತೆಗೆ ಎರಡೂ ದೇಶಗಳ ನಡುವೆ ರಕ್ಷಣೆ, ಉಗ್ರ ನಿಗ್ರಹ, ವ್ಯಾಪಾರೋದ್ದಿಮೆ ಸೇರಿದಂತೆ 15 ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವೃದ್ಧಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಲ್ಲದೆ ಸುಮಾತ್ರಾ ದ್ವೀಪ ಮತ್ತು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಸಂಚರಿಸುವ ಮಲಕಾ ಸ್ಟ್ರೈಟ್ ನಡುವಿನ ಪ್ರದೇಶ ಸಬಾಂಗ್‌ನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಇಬ್ಬರು ನಾಯಕರು ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಇಂಡೋ-ಪೆಸಿಫಿಕ್ ದ್ವೀಪ ಸಮೂಹದಲ್ಲಿ ಶಾಂತಿ ನೆಲೆಸುವಂತಾಗಲು ಆಸಿಯಾನ್ ರಾಷ್ಟ್ರಗಳು ಮತ್ತು ಭಾರತದ ನಡುವೆ ಸಹಭಾಗಿತ್ವ ಯಾವತ್ತೂ ಅಗತ್ಯ ಎಂದರು. ವ್ಯೂಹಾತ್ಮಕವಾಗಿ ಎರಡೂ ರಾಷ್ಟ್ರಗಳು ತಮ್ಮ ನಡುವಿನ ಸಹಕಾರ ವೃದ್ಧಿಗೆ ಆದ್ಯತೆ ನೀಡಲು ಮುಂದಾಗಿವೆ ಎಂದು ಹೇಳಿದ್ದಾರೆ. ಭಾರತ ಹೊಂದಿರುವ ಪೂರ್ವದತ್ತ ನೋಟ (ಲುಕ್ ಈಸ್ಟ್ ಪಾಲಿಸಿ) ಮತ್ತು ಸೆಕ್ಯುರಿಟಿ ಆ್ಯಂಡ್ ಗ್ರೋತ್ ಫಾರ್ ಆಲ್ ಇನ್ ದ ರೀಜನ್ (ಸಾಗರ್) ಅಧ್ಯಕ್ಷ ವಿದೊದೊ ಅವರ ಕಡಲು ರಕ್ಷಣಾ ನೀತಿಗೆ ಸಮನಾಗಿದೆ ಎಂದು ಹೇಳಿದ್ದಾರೆ ಪಿಎಂ ಮೋದಿ. ಜ.26ರಂದು ನವದೆಹಲಿಯಲ್ಲಿ ಗಣರಾಜ್ಯದಿನದ ಅತಿಥಿಗಳಾಗಿ ಆಸಿಯಾನ್ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸಿದ್ದು, ಈ ವಲಯದ ಮತ್ತು ವಿಶ್ವದ ಇತರ ಭಾಗಗಳಲ್ಲಿ ಶಾಂತಿಗೆ ಕಾರಣವಾಗಲಿದೆ ಎಂದರು. ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಯನ್ನು ಪ್ರಧಾನಿ ಅತ್ಯುಗ್ರ ಶಬ್ದಗಳಿಂದ ಖಂಡಿಸಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ವಿದೊದೊ ಮಾತನಾಡಿ “ಭಾರತ ನಮ್ಮ ದೇಶದ ರಕ್ಷಣಾ ಅಭಿವೃದ್ಧಿಯಲ್ಲಿ ವ್ಯೂಹಾತ್ಮಕ ಪಾಲುದಾರ. ಅದನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಉತ್ಸುಕರಾಗಿದ್ದೇವೆ. ಅಂಡಮಾನ್ ದ್ವೀಪ ಸಮೂಹ ಮತ್ತು ಸಬಾಂಗ್ ದ್ವೀಪ ಸಮೂಹದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡಲು ಮುಂದಾಗಿದ್ದೇವೆ’ ಎಂದು ಹೇಳಿದ್ದಾರೆ.
ಇಸ್ತಿಕಾಲ್ ಮಸೀದಿಗೆ ಭೇಟಿ: ಆಗ್ನೇಯ ಏಷ್ಯಾದಲ್ಲಿಯೇ ದೊಡ್ಡ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗ್ರಾಂಡ್ ಇಸ್ತಿಕಾಲ್ ಮಸೀದಿಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ವಿದೊದೊ ಭೇಟಿ ನೀಡಿದ್ದಾರೆ. ಆ ಮಸೀದಿಯನ್ನು ಇಂಡೋನೇಷ್ಯಾದ ಸ್ವಾತಂತ್ರ್ಯ ದಿನಕ್ಕಾಗಿ ನಿರ್ಮಿಸಲಾಗಿದ್ದು, 1978ರಲ್ಲಿ ಅದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿತ್ತು.
ಅರ್ಜುನ ಪ್ರತಿಮೆ ಸಂದರ್ಶನ: ಪ್ರಧಾನಿ ಮೋದಿ ವೀರ ಅರ್ಜುನ ವಿಜಯ ಪ್ರತಿಮೆ ಇರುವ ಸ್ಥಳಕ್ಕೂ ಭೇಟಿ ನೀಡಿದ್ದಾರೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನ ಮತ್ತು ಎಂಟು ಕುದುರೆಗಳಿರುವ ರಥದ ಸಾರಥಿಯಾಗಿರುವ ಕೃಷ್ಣ ಅವರನ್ನು ಚಿತ್ರಿಸುವ ಪ್ರತಿಮೆ ಇದಾಗಿದೆ. 1987ರಲ್ಲಿ ಅದನ್ನು ನಿರ್ಮಿಸಲಾಗಿದೆ. ನಾಯಕತ್ವದ 8 ಗುಣಗಳು ಈ ಕುದುರೆಗಳಲ್ಲಿದೆ ಎಂದು ನಂಬಲಾಗಿದೆ. ಮಲೇಷ್ಯಾ ಮತ್ತು ಸಿಂಗಾಪುರ ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಇಂಡೋನೇಷ್ಯಾಕ್ಕೆ ತಲುಪಿದ್ದಾರೆ.
ವಿದೊದೊ ಮೊಮ್ಮಗನ ಹೆಸರು ಶ್ರೀನರೇಂದ್ರ!
ಮೋದಿ ಭೇಟಿ ಮಾಡಿದ ಅಧ್ಯಕ್ಷ ವಿಡೊಡೊ ತನ್ನ ಮೊಮ್ಮಗನಿಗೆ ಶ್ರೀನರೇಂದ್ರ ಎಂದು ನಾಮಕರಣ ಮಾಡಿದ್ದೇನೆ ಎಂದಿದ್ದಾರೆ. ಮಾರ್ಚ್ 2016ರಲ್ಲಿ ಜನಿಸಿದ ಮೊಮ್ಮಗನಿಗೆ ಮೋದಿಯ ಮೊದಲ ಹೆಸರನ್ನೇ ಇಡಲಾಗಿದೆ. ವಿಡೊಡೊ ಕೊನೆಯ ಪುತ್ರ ಗಿಬ್ರಾನ ರಾಕಾಬುಮಿಂಗ್‌ಗೆ ಜನಿಸಿದ ಈ ಮಗುವಿಗೆ ಜಾನ್ ಏಥಸ್ ಶ್ರೀನರೇಂದ್ರ ಎಂದು ಹೆಸರು ಇಡಲಾಗಿದೆ.