ಧಾರವಾಡ: ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ನಡೆಯುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಜ.12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು. ಅಲ್ಲದೇ, 7500 ಯುವಕರು ಪಥಸಂಚಲನ ಮಾಡಲಿದ್ದಾರೆ.
ಈಗಾಗಲೇ ಉತ್ಸವದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದು, ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳ ಸುಮಾರು 7,500 ಯುವ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಚಟುವಟಿಕೆಗಳು ಧಾರವಾಡದಲ್ಲಿ ನಡೆಯಲಿವೆ. 30 ಸಾವಿರ ಜನರು ಬರುವ ನಿರೀಕ್ಷೆ ಇದೆ. ಈಗಾಗಲೇ 5500 ಜನ ನೋಂದಾಯಿಸಿದ್ದಾರೆ.
ಅತಿಥಿಗಳಿಗೆ ಕೆಸಿಡಿ, ಕೆಯುಡಿ ಹಾಗೂ ಕೃಷಿ ವಿವಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಂದು ಇಲಾಖೆಗೆ ಒಂದೊಂದು ಜವಾಬ್ದಾರಿ ಕೊಟ್ಟಿದ್ದು, ಅಚ್ಚುಕಟ್ಟು ಉತ್ಸವ ಆಯೋಜನೆಗೆ ಅಂತಿಮ ಹಂತದ ಸಿದ್ಧತೆ ನಡೆದಿದೆ ಎಂದರು.