Advertisement

ಫೆ.6ರಂದು ಪ್ರಧಾನಿ ಮೋದಿ ಅವರಿಂದ ತುಮಕೂರು ಎಚ್‌ಎಎಲ್‌ ಘಟಕ ಲೋಕಾರ್ಪಣೆ

05:25 PM Feb 04, 2023 | Team Udayavani |

ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಕಲ್ಪತರು ನಾಡಿನಲ್ಲಿ ಎಚ್‌ಎಎಲ್‌ ಹೆಲಿಕಾಪ್ಟರ್‌ ತಯಾರಿಕಾ ಘಟಕ ಉದ್ಘಾಟನೆ ಗೊಳ್ಳುತ್ತಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿದೆ.

Advertisement

615 ಎಕರೆ: ಗುಬ್ಬಿ ತಾಲೂಕಿನ ಬಿದರಹಳ್ಳ ಕಾವಲ್‌ನಲ್ಲಿ 615 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಹೆಲಿಕಾಪ್ಟರ್‌ ತಯಾರಿಕಾ ಕಾರ್ಖಾನೆ ಉದ್ಘಾಟನೆಗೆ ಸಜ್ಜಾಗಿದೆ. 2016 ಜನವರಿಯಲ್ಲಿ ಪ್ರಧಾನಿ ಮೋದಿಯವರು ಎಚ್‌ಎಎಲ್‌ ಹೆಲಿಕಾಪ್ಟರ್‌ ತಯಾರಿಕಾ ಕಾರ್ಖಾನೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 7 ವರ್ಷಗಳ ಬಳಿಕ ಈ ಘಟಕ ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಮೋದಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲು ದಿನಗಣನೆ ಆರಂಭವಾಗಿದೆ.

ಫೆ.6 ರಂದು ಮಧ್ಯಾಹ್ನ 3.30ಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಘಟಕವನ್ನು ಲೋಕಾರ್ಪಣೆ ಮಾಡಲು ಕಲ್ಪತರುನಾಡಿಗೆ ಆಗಮಿಸುವ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಜಿಲ್ಲಾಡಳಿತ ಹಾಗೂ ಎಚ್‌ಎಎಲ್‌ ಆಡಳಿತ ಮಂಡಳಿ ಸರ್ವ ಸನ್ನದ್ಧವಾಗಿದೆ.

ಮನೆ ಮನೆಗೆ ಗಂಗೆ: ಎಚ್‌ಎಎಲ್‌ ಕಾರ್ಯಕ್ರಮ ಬಳಿಕ ಪ್ರಧಾನಿ, ಜಲ ಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಗಂಗೆ ಕಾಮಗಾರಿಗೂ ಶಿಲಾನ್ಯಾಸ ನೆರವೇರಿಸಲಿದ್ದು, ಈ ಕಾರ್ಯಕ್ಕೂ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾಯಿಂದ ಸರಣಿ ಸಭೆ: ಈಗಾಗಲೇ ಜಿಲ್ಲಾಧಿಕಾರಿ ವೈ.ಎಸ್‌ .ಪಾಟೀಲ್‌ ಅವರು ಜಿಲ್ಲಾಡಳಿತದ ವತಿಯಿಂದ ಪ್ರಧಾನಿಯವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸರಣಿ ಸಭೆಗಳನ್ನು ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

Advertisement

ಊಟದ ವ್ಯವಸ್ಥೆ: ಈ ಅಭೂತ ಪೂರ್ವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸುಮಾರು 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಎಚ್‌ಎಎಲ್‌ ಘಟಕದ ಆವರಣದಲ್ಲಿ ಸೇರುವ ಜನಸ್ತೋಮ ಕುಳಿತುಕೊಳ್ಳಲು ಆಸನಗಳ, ಊಟ, ಕುಡಿಯುವ ನೀರಿನ ವ್ಯವಸ್ಥೆಗೆ ತೊಂದರೆ ಉಂಟಾಗದಂತೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.

ವಿಶಾಲ ವೇದಿಕೆ ನಿರ್ಮಾಣ
ಎಚ್‌.ಎ.ಎಲ್‌ ಹೆಲಿಕಾಪ್ಟರ್‌ ಘಟಕದ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಒಂದು ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಕಾರ್ಯಕ್ರಮಕ್ಕಾಗಿ ವಿಶಾಲ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ.

ಎಚ್‌ಎಎಲ್‌ ನಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಪ್ರಾರಂಭವಾದಾಗ ರಾಜ್ಯ ಸರ್ಕಾರದಿಂದ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಎಚ್‌ಎಎಲ್‌ ಅಧಿಕಾರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.- ವೈ.ಎಸ್‌.ಪಾಟೀಲ್‌, ಜಿಲ್ಲಾಧಿಕಾರಿ

ನೀರಿನ ಬಾಟಲ್‌, ಬ್ಯಾಗ್‌, ಪ್ಲಾಸ್ಟಿಕ್‌ ಕವರ್‌ ತರುವಂತಿಲ್ಲ
ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮೊಬೈಲ್‌ಗ‌ಳನ್ನು ಹೊರತುಪಡಿಸಿ ಬೇರೆ ಇನ್ನಾವುದೇ ವಸ್ತುಗಳನ್ನು ತರುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ತಿಳಿಸಿದ್ದಾರೆ. ಮಧ್ಯಾಹ್ನ 1ರಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಜನರನ್ನು ಬಿಡಲು ಪ್ರಾರಂಭ ಮಾಡಲಾಗುವುದು. 2.30 ರೊಳಗೆ ಎಲ್ಲರೂ ಒಳಗೆ ಸೇರಿರಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ನೀರಿನ ಬಾಟಲ್‌, ಬ್ಯಾಗ್‌ಗಳು, ಪ್ಲಾಸ್ಟಿಕ್‌ ಕವರ್‌ ಸೇರಿದಂತೆ ಇತರೆ ಯಾವುದೇ ವಸ್ತುಗಳನ್ನು ತರುವಂತಿಲ್ಲ ಎಂದು ತಿಳಿಸಿದ ಅವರು, ಕಾರ್ಯಕ್ರಮದ ಸ್ಥಳದಲ್ಲೇ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ 1500ಕ್ಕೂ ಹೆಚ್ಚು ಗಣ್ಯರು
ಬಿದರೆಹಳ್ಳ ಕಾವಲ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಎಚ್‌ಎಎಲ್‌ ಘಟಕ ಲೋಕಾರ್ಪಣೆ ಫೆ.6 ರಂದು ಮಧ್ಯಾಹ್ನ 3.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸುವರು. ನಂತರ ಎಲ್‌ಯುಎಚ್‌ ಹೆಲಿಕಾಪ್ಟರ್‌ನ್ನು ಸಹ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು. ಎಚ್‌ಎಎಲ್‌ ಹೆಲಿಕಾಪ್ಟರ್‌ ತಯಾರಿಕಾ ಕಾರ್ಖಾನೆ ನಿರ್ಮಾಣಕ್ಕೆ 615 ಎಕರೆ ಜಮೀನು ಕೊಡಲಾಗಿತ್ತು. 2016
ಜನವರಿಯಲ್ಲಿ ಪ್ರಧಾನಿ ಮೋದಿಯ ವರು ಭೂಮಿಪೂಜೆ ನೆರವೇರಿಸಿದ್ದರು. 6 ವರ್ಷಗಳಲ್ಲಿ ಹೆಲಿಕಾಪ್ಟರ್‌ ತಯಾರು ಮಾಡುವ ಮಟ್ಟಕ್ಕೆ ಸಿದ್ಧಗೊಳಿಸಿ ಲೋಕಾರ್ಪಣೆಮಾಡಲಾಗುತ್ತಿದೆ. ಈ ಅಭೂತಪೂರ್ವ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸಹಾಯಕ ರಕ್ಷಣಾ ಸಚಿವರು, ರಾಜ್ಯ ರಕ್ಷಣಾ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರುಗಳು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಸುಮಾರು 1500ಕ್ಕೂ ಹೆಚ್ಚು ಮಂದಿ ಗಣ್ಯರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಊಟ, ಬಸ್‌, ಪಾರ್ಕಿಂಗ್‌ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ವಾಹನಗಳ ಸಂಚಾರ ಮಾರ್ಗ ಬದಲಾವಣೆ
ಫೆ.6 ರಂದು ಬೆಳಗ್ಗೆಯಿಂದ ಸಂಜೆ ವರೆಗೆ 206 ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ವಾಹನ ಚಾಲಕರು, ಸಾರ್ವ ಜನಿಕರು ಮಾರ್ಗ ಬದಲಾವಣೆ ಬಗ್ಗೆ ಗಮನ ಹರಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮನವಿ ಮಾಡಿದರು. ಜಿಲ್ಲೆಗೆ ಪ್ರಧಾನಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಐದಾರು ಬಾರಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸೂಚನೆ ಕೊಡಲಾಗಿದೆ. ಎಚ್‌ಎಎಲ್‌ ಅಧಿಕಾರಿಗಳು ಸಹ ಎಲ್ಲ ಸಿದ್ಧತೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಬೇರೆ ಕಾರ್ಯಕ್ರಮ ಮಾಹಿತಿ ಇಲ್ಲ
ಎಚ್‌ಎಎಲ್‌ ಘಟಕದ ಉದ್ಘಾಟನೆ ಬಳಿಕ ಜಲಜೀವನ್‌ ಮಿಷನ್‌ ಯೋಜನೆಯ ಮನೆ ಮನೆ ಗಂಗೆ ಕಾರ್ಯಕ್ರಮಕ್ಕೆ ಪ್ರಧಾನಿಗಳು ಶಂಕುಸ್ಥಾಪನೆಯನ್ನು ನೆರವೇರಿಸುವರು. ಈ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳ ಕುರಿತು ಪ್ರಧಾನಿ ಕಚೇರಿಯಿಂದ ಇದುವರೆಗೂ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಚಿ.ನಿ.ಪುರುಷೋತ್ತಮ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next