ಮುಂಬಯಿ: ಕೊಂಕಣ ರೈಲ್ವೇ ಮಾರ್ಗದ ಮುಂಬಯಿ – ಗೋವಾ ನಡುವೆ ವಂದೇ ಭಾರತ್ ಎಕ್ಸ್ ಪ್ರಸ್ ರೈಲು ಜೂ. 5ರಿಂದ ಓಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂ. 3ರಂದು ಬೆಳಗ್ಗೆ 10.30ಕ್ಕೆ ಮಡ್ಗಾಂವ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಸಮಾರಂಭದಲ್ಲಿ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವಿ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಈ ರೈಲು ಮುಂಬಯಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಬೆಳಗ್ಗೆ 5.25ಕ್ಕೆ ಹೊರಡಲಿದ್ದು, ದಾದರ್, ಥಾಣೆ, ಪನ್ವೇಲ್, ರೋಹಾ, ಖೇಡ್, ರತ್ನಗಿರಿ, ಕಂಕಾವಲಿ, ಥಿವೀಮ್ ನಿಲ್ದಾಣಗಳಲ್ಲಿ ನಿಲುಗಡೆ ಮೂಲಕ ಅಪರಾಹ್ನ 1.15ಕ್ಕೆ ಮಡ್ಗಾಂವ್ ತಲುಪಲಿದೆ.
ಮಡ್ಗಾಂವ್‌ನಿಂದ ಅಪರಾಹ್ನ 2.35ಕ್ಕೆ ಹೊರಟು ರಾತ್ರಿ 10.25ಕ್ಕೆ ಮುಂಬಯಿ ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ತಲುಪಲಿದೆ.
Related Articles
ಈ ರೈಲು ರತ್ನಗಿರಿ ನಿಲ್ದಾಣದಲ್ಲಿ 5 ನಿಮಿಷಗಳ ಕಾಲ, ಉಳಿದೆಲ್ಲ ನಿಲ್ದಾಣಗಳಲ್ಲಿ ಎರಡು ನಿಮಿಷ ನಿಲುಗಡೆಯಾಗಲಿದೆ.
ಮುಂಗಾರು ಸಮಯದಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಚಲಿಸುವ ಇತರ ರೈಲುಗಳ ವೇಗವು ನಿಧಾನವಾಗಿದ್ದು, ಮುಂಗಾರು ಹೊರತುಪಡಿಸಿ ಉಳಿದ ಅವಧಿಗೆ ಈ ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.