ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆ ಮಾರ್ಚ್ 27 ರಿಂದ ಶುರುವಾಗಲಿದ್ದು, ಇಂದು ಸಂಜೆ (ಭಾನುವಾರ) ಪ್ರಧಾನಿ ಮೋದಿ ಕೊಲ್ಕತ್ತಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಮುಖಂಡ ವಿಜಯ್ ವರ್ಗೀಯ ನೇತೃತ್ವದಲ್ಲಿ ಕೇಸರಿ ಪಾಳಯಕ್ಕೆ ಸೇರಿದ್ದಾರೆ. ನಿನ್ನೆ ಮಿಥುನ್ ಮನೆಗೆ ತೆರಳಿದ್ದ ವಿಜಯ್ ವರ್ಗೀಯ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ಇನ್ನು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮೋದಿ ಕೊಲ್ಕತ್ತಾಕ್ಕೆ ಭೇಟಿ ನೀಡುತ್ತಿದ್ದು, ಬ್ರಿಗೇಡ್ ಪರೇಡ್ ಮೈದಾನ ರ್ಯಾಲಿಗೆ ಸಜ್ಜಾಗಿದೆ.
ಮೋದಿ ಕೊಲ್ಕತ್ತಾ ಭೇಟಿ ಹಿನ್ನೆಲೆಯಲ್ಲಿಯೇ ಪ.ಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೃಹತ್ ಹೋರಾಟವೊಂದನ್ನು ಹಮ್ಮಿಕೊಂಡಿದ್ದಾರೆ. ಎಲ್ ಪಿ ಜಿ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟದಲ್ಲಿ ಅತಿ ಹೆಚ್ಚು ಮಹಿಳೆಯರೇ ಭಾಗಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಕೊಲ್ಕತ್ತಾ ಭೇಟಿ ಹಿನ್ನೆಲೆಯಲ್ಲಿ ನಗರದ ತುಂಬ 1500 ಸಿಸಿ ಟಿವಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಅಲ್ಲದೆ ಡ್ರೋನ್ ಕ್ಯಾಮೆರಾಗಳ ಹದ್ದಿನ ಕಣ್ಣು ಇಡಲಾಗಿದ್ದು, ಭದ್ರತೆಯನ್ನು ಒದಗಿಸಲಾಗಿದೆ. ಮೋದಿ ರ್ಯಾಲಿಯಲ್ಲಿ ಸುಮಾರು ಏಳು ಲಕ್ಷ ಜನ ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
294 ಕ್ಷೇತ್ರಗಲ್ಲಿ, ಏಳು ಹಂತದಲ್ಲಿ ಪಶ್ಚಿಮ ಬಂಗಾಳ ಚುನಾವಣೆ ನಡೆಯಲಿದೆ.