Advertisement

ಪಿಎಂ ಮೋದಿ ವಿರುದ್ಧ ರಾಹುಲ್‌ ಅವಹೇಳನ

12:30 AM Jan 11, 2019 | |

ಹೊಸದಿಲ್ಲಿ: ಸಂಸತ್‌ನಲ್ಲಿ ರಫೇಲ್‌ ಚರ್ಚೆಗೆ ಉತ್ತರ ಕುರಿತಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರನ್ನು ಬಳಸಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜೈಪುರದ ರ್ಯಾಲಿಯಲ್ಲಿ ಮಾತಾಡಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಸ್ಪಷ್ಟನೆ ಕೊಡುವ ಆತುರದಲ್ಲಿ ಮತ್ತೂಂದು ತಪ್ಪೆಸಗಿದ್ದಾರೆ. “ಮೋದಿ ಯವರೆ, ಮಹಿಳೆಯರಿಗೆ ಗೌರವ ಕೊಡುವ ಸದ್ವಿಚಾರ ಮನೆಗಳಿಂದಲೇ ಶುರುವಾಗುತ್ತದೆ. ಭಯ ಪಡಬೇಡಿ. ಯುಪಿಎ ಅವಧಿಯಲ್ಲಾದ ರಾಫೆಲ್‌ ಡೀಲ್‌ ಅನ್ನು ಬದಲಾಯಿಸಬೇಕೆಂದು ವಾಯು ಪಡೆ ನಿಮ್ಮನ್ನು ಕೇಳಿತ್ತೇ, ಇಲ್ಲವೇ ಎಂದಷ್ಟೇ ಹೇಳಿ’ ಎಂದು ಕೇಳಿರುವುದರ ಜತೆಗೆ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದು, ಮತ್ತೂಂದು ವಿವಾದಕ್ಕೆ ಕಾರಣವಾಗಿದೆ. 

Advertisement

ರಾಹುಲ್‌ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, “ಮಹಿಳೆಯೊಬ್ಬರು ಲೋಕಸಭೆ ಯಲ್ಲಿ ಉತ್ತರಿಸಿದ್ದು ರಾಹುಲ್‌ ಅವರ ಅಹಂ ಅನ್ನು ಈ ಮಟ್ಟಕ್ಕೆ ಕೆಣಕಿದೆಯೆಂದು ನಾವು ಭಾವಿಸಿರಲಿಲ್ಲ” ಎಂದು ಚುಚ್ಚಿದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು, “”ನಿರ್ಮಲಾ ಸೀತಾರಾಮನ್‌ ಅವರನ್ನು ರಾಹುಲ್‌ ಗಾಂಧಿ ಮಾಡಿರುವ ಟೀಕೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ತೀರಾ ಕೆಳಮಟ್ಟದ್ದು” ಎಂದಿದ್ದಾರೆ. 

ವಿರೋಧ: ರಾಹುಲ್‌ ಗಾಂಧಿಯವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿವೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ “”ಮೋದಿಯವರು ಒಬ್ಬ ಮಹಿಳೆಯ ಬಳಿ ತಮ್ಮನ್ನು ರಕ್ಷಿಸಿ ಎಂದು ಮೊರೆಯಿಟ್ಟರು ಎಂದು ರಾಹುಲ್‌ ಟೀಕೆ ಮಾಡಿದ್ದಾರೆ. ಅಂದರೆ, ಇಲ್ಲಿ ಮಹಿಳೆಯು ದುರ್ಬಲಳು ಎಂದು ರಾಹುಲ್‌ ಹೇಳಲು ಯತ್ನಿಸುತ್ತಿದ್ದಾರೆಯೇ” ಎಂದು ಕೇಳಿದ್ದಾರೆ. ಅಮೃತಾ ಭಿಂದರ್‌ ಎಂಬುವರು, “”ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಬಂದ ಟೀಕೆಗಳ ಬಗ್ಗೆ ಸದನದಲ್ಲಿ ನಿರ್ಮಲಾ ಸೀತಾರಾಮನ್‌ ಉತ್ತರಿಸಬಾರದಿತ್ತೇ” ಎಂದು ಖಾರವಾಗಿ ಕೇಳಿದ್ದಾರೆ. ಹೀಗೆ, ಹಲವಾರು ಮಂದಿ ರಾಹುಲ್‌ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next