ಶಿವಮೊಗ್ಗ: ಮೊದಲು ಮುಖ್ಯ ನಗರಗಳಲ್ಲಿ ಮಾತ್ರ ಅಭಿವೃದ್ಧಿಯಾಗುತ್ತಿತ್ತು. ಈಗ ಹಳ್ಳಿ ಹಳ್ಳಿಗಳಿಗೆ ಅಭಿವೃದ್ದಿ ತಲುಪುತ್ತಿದೆ. ಬಿಜೆಪಿಯ ಡಬಲ್ ಇಂಜಿನ್ ಸರಕಾರದ ಪ್ರಗತಿ ರಥ ವೇಗದಿಂದ ಓಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಮತ್ತು ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಶಿವಮೊಗ್ಗದ ಬಹು ಕಾಲದ ಕನಸು ಇಂದು ನನಸಾಗಿದೆ. ಈ ವಿಮಾನ ನಿಲ್ದಾಣವು ಭವ್ಯವಾಗಿ, ಸುಂದರವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ ರಾಜ್ಯದ ಸಂಪ್ರದಾಯ ಮತ್ತು ತಂತ್ರಜ್ಞಾನದ ಸಂಗಮವಾಗಿದೆ ಎಂದರು.
ವಾಹನವಿರಲಿ, ಸರ್ಕಾರವೇ ಆಗಲಿ, ಡಬಲ್ ಇಂಜಿನ ನಲ್ಲಿ ವೇಗ ಜಾಸ್ತಿಯಾಗುತ್ತದೆ. ಬಿಜೆಪಿಯ ಡಬಲ್ ಇಂಜಿನ್ ಸರಕಾರದ ಪ್ರಗತಿ ರಥ ವೇಗದಿಂದ ಓಡುತ್ತಿದೆ.
Related Articles
2014ರ ಮೊದಲು ದೇಶದಲ್ಲಿ ದೊಡ್ಡ ನಗರದಲ್ಲಿ ಮಾತ್ರ ವಿಮಾನ ನಿಲ್ದಾನವಿತ್ತು. ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣ ಮಾಡುವ ಬಗ್ಗೆ ಕಾಂಗ್ರೆಸ್ ಯೋಚನೆಯೂ ಮಾಡಿರಲಿಲ್ಲ. ನಾವು ಈಗ ದೇಶದ ಸಣ್ಣ ನಗರಗಳಲ್ಲೂ ಏರ್ ಪೋರ್ಟ್ ಮಾಡುತ್ತಿದ್ದೇವೆ. ಹವಾಯಿ ಚಪ್ಪಲ್ ಹಾಕುವವನು ಕೂಡಾ ವಿಮಾನ ಪ್ರಯಾಣ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕೆ ನಾವು ಉಡಾನ್ ಯೋಜನೆ ಆರಂಭಿಸಿದ್ದೇವೆ. ಈಗ ಸಾಮಾನ್ಯರು ಕೂಡಾ ವಿಮಾನಯಾನ ಮಾಡುವುದು ಸಾಧ್ಯವಾಗಿದೆ ಎಂದರು.
ಮೊದಲು ಏರ್ ಇಂಡಿಯಾದ ಬಗ್ಗೆ ಕೆಟ್ಟ ಸುದ್ದಿಗಳೆ ಬರುತ್ತಿತ್ತು. ಆದರೆ ಈಗ ಏರ್ ಇಂಡಿಯಾ ಭಾರತದ ಹೊಸ ಸಾಮರ್ಥ್ಯದ ರೂಪದಲ್ಲಿ ವಿಶ್ವದಲ್ಲಿ ಹೊಸ ಎತ್ತರಕ್ಕೆ ಸಾಗುತ್ತಿದೆ. ಮುಂದಿನ ದಿಗಳಲ್ಲಿ ಸಾವಿರಾರು ವಿಮಾನದ ಅಗತ್ಯ ಭಾರತಕ್ಕೆ ಆಗಲಿದೆ. ಅದೇ ವೇಳೆ ಯುವ ಜನತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದ ಪ್ರಧಾನಿ ಮೋದಿ ಅವರು, ಈಗ ನಾವು ವಿದೇಶದಿಂದ ವಿಮಾನಗಳನ್ನು ಖರೀದಿ ಮಾಡುತ್ತಿದ್ದೇವೆ. ಆದರೆ ಮೇಡ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ದಿನಗಳು ಬಹಳ ದೂರವಿಲ್ಲ ಎಂದರು.
ಬಿಎಸ್ ವೈ ಗೆ ಗೌರವ: ಭಾಷಣದುದ್ದಕ್ಕೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಹಾಡಿಹೊಗಳಿದ ಪಿಎಂ ಮೋದಿ, ಇಂದು ಹಿರಿಯ ನಾಯಕ ಯಡಿಯೂರಪ್ಪನವರ ಜನ್ಮದಿನ. ಅವರ ಆರೋಗ್ಯಕ್ಕೆ ನಾವೆಲ್ಲರೂ ಪ್ರಾರ್ಥಿಸೋಣ. ಅವರು ಜೀವನವು ಬಡವರ, ರೈತರ ಕಲ್ಯಾಣಕ್ಕೆ ಸಮರ್ಪಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಒಂದು ಪ್ರೇರಣೆಯಾಗಿದೆ. ಅವರ ಜೀವನ ಎಂದಿಗೂ ಪ್ರೇರಣೆಯಾಗಿದೆ ಎಂದರು.
ಅಲ್ಲದೆ ನೆರೆದಿದ್ದ ಸಭಿಕರಿಗೆ ತಮ್ಮ ಮೊಬೈಲ್ ನಲ್ಲಿ ಫ್ಲಾಶ್ ಲೈಟ್ ಆನ್ ಮಾಡಲು ಹೇಳಿ ಯಡಿಯೂರಪ್ಪನವರಿಗೆ ಗೌರವ ತೋರಿಸಿ ಎಂದರು.
ಶಿವಮೊಗ್ಗ ಜಿಲ್ಲೆ, ಮಲೆನಾಡು, ಇಲ್ಲಿನ ಪ್ರಕೃತಿ, ಸಂಸ್ಕೃತಿ ಮತ್ತು ಕೃಷಿಯನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.