ನವದೆಹಲಿ: ಕಳೆದ ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ ಎಂಟು ಪಟ್ಟು ಬೆಳವಣಿಗೆಯಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ “ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್‌ಪೋ’ ಉದ್ಘಾಟಿಸಿ ಮಾತನಾಡಿದ ಅವರು, “ಎಂಟು ವರ್ಷಗಳ ಹಿಂದೆ 77 ಸಾವಿರ ಕೋಟಿ ರೂ. ಗಾತ್ರದಷ್ಟಿದ್ದ ದೇಶದ ಜೈವಿಕ ಆರ್ಥಿಕತೆ, ಇಂದು 6.2 ಲಕ್ಷ ಕೋಟಿ ರೂ.ಗಳಿಗೆ ಬೆಳೆದಿದೆ. ಎಲ್ಲಾ ರಂಗಗಳ ಬೆಳವಣಿಗೆಗೆ ಸಮಾನವಾದ ಉತ್ತೇಜನ ನೀಡಿದ್ದೇ ಕಾರಣ. ಎಂಟು ವರ್ಷಗಳ ಹಿಂದೆ ಇದ್ದಂತೆ, ಕೆಲವು ಕ್ಷೇತ್ರಗಳನ್ನು ಮಾತ್ರ ಬೆಳೆಸುವುದು, ಕೆಲವನ್ನು ಕಡೆಗಣಿಸುವುದನ್ನು ನಾವು ಮಾಡಲಿಲ್ಲ” ಎಂದು ಮೋದಿ ಹೇಳಿದ್ದಾರೆ.
“ಎಂಟು ವರ್ಷಗಳ ಹಿಂದೆ ಈ ರಂಗದಲ್ಲಿ ಕೇವಲ ನೂರರಷ್ಟಿದ್ದ ಸ್ಟಾರ್ಟ್‌ಅಪ್‌ಗ್ಳು ಇಂದು 70 ಸಾವಿರಕ್ಕೆ ಮುಟ್ಟಿದೆ. ಅಲ್ಲದೆ, ಸುಲಭದಲ್ಲಿ ವ್ಯವಹಾರ ನಡೆಸುವಂಥ ಹಾಗೂ ಉದ್ಯಮಶೀಲತೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವಂಥ ವಾತಾವರಣನ್ನು ನಿರ್ಮಿಸಲಾಗಿದೆ. ಇದರ ಪರಿಣಾಮ, ಜೈವಿಕ ಆರ್ಥಿಕತೆಯ ಸುಮಾರು 60ಕ್ಕೂ ಹೆಚ್ಚು ಸ್ತರಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗ್ಳು ಇಂದು ಕಾರ್ಯನಿರ್ವಹಿಸುತ್ತಿವೆ” ಎಂದು ಮೋದಿ ಹೇಳಿದ್ದಾರೆ.