Advertisement

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

11:37 PM Sep 18, 2021 | Team Udayavani |

ಪಣಜಿ/ಹೊಸದಿಲ್ಲಿ: “ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ನೀಡಿದ್ದೇ ತಡ, ಇಲ್ಲಿನ ರಾಜಕೀಯ ಪಕ್ಷವೊಂದಕ್ಕೆ “ಜ್ವರ’ವೇ ಬಂದುಬಿಟ್ಟಿತು.’

Advertisement

ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ಕಾಂಗ್ರೆಸ್‌ ಅನ್ನು ವ್ಯಂಗ್ಯವಾಡಿದ್ದಾರೆ. ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಶುಕ್ರವಾರ ದೇಶಾದ್ಯಂತ 2.50 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿತ್ತು.

ಶನಿವಾರ ಗೋವಾದ ಆರೋಗ್ಯ ಕಾರ್ಯಕರ್ತರು ಹಾಗೂ ಲಸಿಕೆಯ ಫ‌ಲಾನುಭವಿಗಳೊಂದಿಗೆ ವರ್ಚುವಲ್‌ ಸಂವಾದ ನಡೆಸುವಾಗ ಈ ವಿಚಾರ ಪ್ರಸ್ತಾವಸಿದ ಪ್ರಧಾನಿ ಮೋದಿ, “ನಿಮ್ಮೆಲ್ಲರ ಪ್ರಯತ್ನದ ಫ‌ಲವೆಂಬಂತೆ, ದೇಶವು ಒಂದೇ ದಿನ 2.50 ಕೋಟಿ ಡೋಸ್‌ನ ದಾಖಲೆ ಬರೆದಿದೆ. ಜಗತ್ತಿನ ಅತೀ ಪ್ರಬಲ ರಾಷ್ಟ್ರಗಳಿಗೂ ಇಂಥದ್ದೊಂದು ಸಾಧನೆ ಮಾಡಲು ಸಾಧ್ಯವಾಗಿಲ್ಲ. ನನಗೆ ಇದೊಂದು ಅವಿಸ್ಮರಣೀಯ ಮತ್ತು ಭಾವನಾತ್ಮಕ ಕ್ಷಣ’ ಎಂದು ಹೇಳಿದ್ದಾರೆ. ಜತೆಗೆ, “ಲಸಿಕೆ ಪಡೆದ ಮಾರನೇ ದಿನ ಜನರಿಗೆ ಜ್ವರ ಬರುತ್ತದೆ. ಆದರೆ, ನನ್ನ ಜನ್ಮದಿನದಂದು 2.5 ಕೋಟಿ ಲಸಿಕೆ ವಿತರಿಸಿದ ಬೆನ್ನಲ್ಲೇ ರಾಜಕೀಯ ಪಕ್ಷವೊಂದಕ್ಕೆ ಭಾರೀ ಜ್ವರ ಬಂದುಬಿಟ್ಟಿದೆ’ ಎಂದೂ ವಿಪಕ್ಷಗಳ ಹೆಸರೆತ್ತದೇ ಕುಟುಕಿದ್ದಾರೆ ಮೋದಿ.

ಕಾಂಗ್ರೆಸ್‌ ಟೀಕೆ: ಮೋದಿ ಹುಟ್ಟುಹಬ್ಬದಂದು ದಾಖಲೆ ಲಸಿಕೆ ವಿತರಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಕೆಲವು ಬಿಜೆಪಿ ಆಡಳಿತದ ರಾಜ್ಯಗಳು ಪ್ರಧಾನಿ ಮೋದಿ ಅವರ ಜನ್ಮದಿನದಂದು ದಾಖಲೆ ಪ್ರಮಾಣದಲ್ಲಿ ಲಸಿಕೆ ನೀಡುವ ಮೂಲಕ ಸಾಧನೆ ಮಾಡಿವೆ. ಇಂಥ ತ್ವರಿತಗತಿಯ ಲಸಿಕೆ ವಿತರಣೆಯು ದೇಶಕ್ಕೆ ಅಗತ್ಯವಿದೆ. ಹಾಗಾಗಿ, ಪ್ರತಿದಿನವೂ ಮೋದಿ ಬರ್ತ್‌ಡೇ ಆಚರಣೆ ನಡೆದರೆ ಒಳ್ಳೆಯದು’ ಎಂದು ಹೇಳಿದೆ.

80 ಕೋಟಿ ಡೋಸ್‌ ವಿತರಣೆ: ಈ ನಡುವೆ, ದೇಶಾದ್ಯಂತ ಈವರೆಗೆ ಬರೋಬ್ಬರಿ 80 ಕೋಟಿ ಡೋಸ್‌ ಲಸಿಕೆ ವಿತರಣೆ ಪೂರ್ಣಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಕ್‌ ಮಾಂಡವಿಯಾ ಶನಿವಾರ ಮಾಹಿತಿ ನೀಡಿದ್ದಾರೆ. ದೇಶದಲ್ಲಿ 10 ಕೋಟಿ ಮಂದಿಗೆ ಲಸಿಕೆ ನೀಡಲು 85 ದಿನಗಳು ಬೇಕಾದವು. 20 ಕೋಟಿಯ ಗಡಿ ದಾಟಲು 45 ದಿನಗಳು ಮತ್ತು 70 ಕೋಟಿಗೆ ತಲುಪಲು ಕೇವಲ 20 ದಿನಗಳು ಬೇಕಾದವು ಎಂದೂ ಹೇಳಿದ್ದಾರೆ. ಇದೇ ವೇಳೆ, ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳಲ್ಲಿ ದೇಶದಲ್ಲಿ 35,662 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 281 ಮಂದಿ ಸಾವಿಗೀಡಾಗಿದ್ದಾರೆ.

Advertisement

ಲಸಿಕೆ ಪಡೆಯದವರಿಗೆ ಸೌಲಭ್ಯವಿಲ್ಲ! :

ಕೊರೊನಾ ಲಸಿಕೆ ಪಡೆಯದಿರುವವರು ಸರಕಾರಿ ಸಾರಿಗೆ ಬಳಸುವಂತಿಲ್ಲ, ಸರಕಾರಿ ಕಚೇರಿ ಪ್ರವೇಶಿಸುವಂತಿಲ್ಲ, ಜಿಮ್‌  ಬಳಸುವಂತಿಲ್ಲ ಎಂದು ಅಹ್ಮದಾಬಾದ್‌ ನಗರ ಪಾಲಿಕೆ ಆದೇಶಿಸಿದೆ. ಒಂದು ಅಥವಾ ಎರಡು ಡೋಸ್‌ ಪಡೆದವರಿಗೆ ಮಾತ್ರವೇ ಈ ಸರಕಾರಿ ಸೌಲಭ್ಯಗಳನ್ನು ಬಳಸಲು ಅವಕಾಶವಿರುತ್ತದೆ ಎಂದೂ ನಗರ ಪಾಲಿಕೆ ಸ್ಪಷ್ಟಪಡಿಸಿದೆ.

ರಾಜ್ಯಗಳಿಗೆ ಸೂಚನೆ :

ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಕೊರೊನಾ ಸ್ಥಿತಿಯನ್ನು ಆಳವಾಗಿ ಪರಿಶೀಲಿಸಬೇಕು. ಆರೋಗ್ಯ ಮೂಲಸೌಕರ್ಯ ಬಲಿಷ್ಠಗೊಳಿಸಬೇಕು. ಔಷಧ ಸಂಗ್ರಹ, ಮಾನವ ಸಂಪನ್ಮೂಲ ಸನ್ನದ್ಧತೆಯಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ‌ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next