ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ(ಫೆ.08, 2021) ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಪಾಲರ ಬಜೆಟ್ ಅಧಿವೇಶನದ ವಂದನಾ ನಿರ್ಣಯದ ಕುರಿತ ಚರ್ಚೆಗೆ ಉತ್ತರ ನೀಡುತ್ತ ಕೇಂದ್ರದ ಕೃಷಿ ಕಾಯ್ದೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೃಷಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಲಾಭವಾಗಲಿದೆ ಎಂದು ಹೇಳಿರುವ ಮಾತನ್ನು ಉಲ್ಲೇಖಿಸುವ ಮೂಲಕ ತಿರುಗೇಟು ನೀಡಿದರು.
ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಲುವನ್ನು ಟೀಕಿಸಿರುವ ಪ್ರಧಾನಿ ಮೋದಿ, ರಾಜ್ಯಸಭೆಯಲ್ಲಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಭಾರತದಲ್ಲಿ ಕೃಷಿ ಮಾರುಕಟ್ಟೆಗೆ ಎದುರಾಗುವ ಎಲ್ಲಾ ಅಡೆತಡೆಯನ್ನು ನಿವಾರಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿರುವುದಾಗಿ ಹೇಳಿದರು.
ಮನಮೋಹನ್ ಸಿಂಗ್ ಜೀ ಅವರು ರೈತರಿಗೆ ಮುಕ್ತ ಮಾರುಕಟ್ಟೆ ಒದಗಿಸುವ ಕುರಿತು ಮಾತನಾಡಿದ್ದರು. ಅಷ್ಟೇ ಅಲ್ಲ ದೇಶದಲ್ಲಿ ದೊಡ್ಡ ಮಟ್ಟದ ಸಾಮಾನ್ಯ ಮಾರುಕಟ್ಟೆ ರೈತರಿಗೆ ಲಭ್ಯವಾಗಲಿದೆ. ಮನಮೋಹನ್ ಸಿಂಗ್ ಜೀ ಹೇಳಿಕೆ ಬಗ್ಗೆ ಕಾಂಗ್ರೆಸ್ ಹೆಮ್ಮೆ ಪಡಬೇಕು, ಆದರೆ ಇದನ್ನು ಮೋದಿ ಪೂರ್ಣಗೊಳಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಯೂ ಟರ್ನ್ ತಳೆದಿರುವ ಕಾಂಗ್ರೆಸ್ ನಿಲುವಿನ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ ಪ್ರಧಾನಿ, ಕೃಷಿ ಕಾಯ್ದೆ ಬಗ್ಗೆ ನನ್ನ ಮಾತು ಬೇಡ, ಮನಮೋಹನ್ ಸಿಂಗ್ ಜೀ ಏನು ಹೇಳಿದ್ದರು ಎಂಬುದನ್ನು ಕೇಳಿಸಿಕೊಳ್ಳಿ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು, ವಿರೋಧ ಪಕ್ಷಗಳು ಕೂಡಾ ಬೆಂಬಲ ಸೂಚಿಸಿವೆ. ಆದರೆ ಕೇಂದ್ರ ಸರ್ಕಾರ ತಿದ್ದುಪಡಿಗೆ ಬದ್ದವಿದ್ದು, ಕಾಯ್ದೆ ರದ್ದು ಮಾಡಲು ನಿರಾಕರಿಸಿದೆ. ಮತ್ತೊಂದೆಡೆ ಕೃಷಿ ಕಾಯ್ದೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿದೆ.