Advertisement

ಬುದ್ಧನ ಜನ್ಮ ಸ್ಥಳದಲ್ಲಿ ಪ್ರಧಾನಿ ಮೋದಿ: ನೇಪಾಳದೊಂದಿದೆ ರಾಜತಾಂತ್ರಿಕ ಮಾತುಕತೆ

09:20 PM May 16, 2022 | Vishnudas Patil |

ಲುಂಬಿನಿ/ನವದೆಹಲಿ: ಬುದ್ಧಪೂರ್ಣಿಮೆಯ ದಿನವಾದ ಸೋಮವಾರ ಇದೇ ಮೊದಲ ಬಾರಿಗೆ ನೇಪಾಳದ ಲುಂಬಿನಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗಡಿ ಬಿಕ್ಕಟ್ಟಿನಿಂದಾಗಿ ಹದಗೆಟ್ಟಿದ್ದ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತೆ ಬೆಸೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

2014ರ ಬಳಿಕ ಪ್ರಧಾನಿ ಮೋದಿ ಅವರು 5ನೇ ಬಾರಿಯ ನೇಪಾಳ ಭೇಟಿ ಇದಾದರೂ, ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ತೆರಳಿರುವುದು ಇದೇ ಮೊದಲು. ನೇಪಾಳ ಪ್ರಧಾನಿ ಶೇರ್‌ ಬಹಾದೂರ್‌ ದೇಬ್‌ ಅವರ ಆಹ್ವಾನದ ಮೇರೆಗೆ ನೆರೆರಾಷ್ಟ್ರಕ್ಕೆ ಪ್ರವಾಸ ಕೈಗೊಂಡ ಅವರು, ದೇಬ್‌ ಜೊತೆಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಿದ್ದಾರೆ.

ಇದೇ ವೇಳೆ, ಉನ್ನತ ಶೈಕ್ಷಣಿಕ ಸಂಸ್ಥೆಗಳ ನಡುವೆ ಸಹಕಾರ, ಜಲವಿದ್ಯುತ್‌ ಯೋಜನೆ, ಬೌದ್ಧಧರ್ಮದ ಅಧ್ಯಯನ ಸೇರಿದಂತೆ 6 ಒಪ್ಪಂದಗಳಿಗೆ ಉಭಯ ದೇಶಗಳು ಸಹಿಯನ್ನೂ ಹಾಕಿವೆ. ಭಾರತದ ಸರ್ಕಾರಿ ಸ್ವಾಮ್ಯದ ಎಸ್‌ಜೆವಿಎನ್‌ ಲಿಮಿಟೆಡ್‌ ನೇಪಾಳದಲ್ಲಿ 4,900 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಜಲವಿದ್ಯುತ್‌ ಯೋಜನೆ ಅರುಣ್‌-4 ಅನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ. 490 ಮೆ.ವ್ಯಾ.ನ ಈ ಯೋಜನೆ ಜಾರಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸೋಮವಾರ ಉಭಯ ದೇಶಗಳ ಪ್ರಧಾನಿಗಳ ಸಮ್ಮುಖದಲ್ಲೇ ಸಹಿ ಹಾಕಲಾಗಿದೆ.

ಭಾರತದ ನೆರವಿಗೆ ಧನ್ಯವಾದ
ಅಂತಾರಾಷ್ಟ್ರೀಯ ಬೌದ್ಧಧರ್ಮೀಯರ ಸಮ್ಮೇಳನದಲ್ಲಿ ಮಾತನಾಡಿದ ನೇಪಾಳ ಪ್ರಧಾನಿ ಶೇರ್‌ ಬಹಾದೂರ್‌ ದೇಬಾ, “ಪರಸ್ಪರ ಗೌರವದೊಂದಿಗೆ ಭಾರತದೊಂದಿಗಿನ ಸಂಬಂಧವನ್ನು ಬಲಿಷ್ಠಗೊಳಿಸಲು ನೇಪಾಳ ಎದುರುನೋಡುತ್ತಿದೆ. ಎರಡೂ ದೇಶಗಳು ಸಮಾನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಹಾಗೂ ಬಂಧದೊಂದಿಗೆ ಬೆಸೆದುಕೊಂಡಿವೆ. ನಮ್ಮ ದೇಶದ ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ, ಜಲ ವಿದ್ಯುತ್‌, ಕೃಷಿ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಭಾರತದ ಸಹಕಾರಕ್ಕೆ ನಾವು ಚಿರಋಣಿಗಳು’ ಎಂದಿದ್ದಾರೆ.

ನೇಪಾಳದಿಂದ ನೇರವಾಗಿ ಖುಷಿನಗರಕ್ಕೆ
ತಮ್ಮ ಒಂದು ದಿನದ ನೇಪಾಳ ಪ್ರವಾಸ ಮುಗಿಸಿ ಸೋಮವಾರ ಸಂಜೆ ಸ್ವದೇಶಕ್ಕೆ ವಾಪಸಾದ ಪ್ರಧಾನಿ ಮೋದಿ ಅವರು ನೇರವಾಗಿ ಉತ್ತರಪ್ರದೇಶದ ಖುಷಿನಗರಕ್ಕೆ ತೆರಳಿದ್ದಾರೆ. ಇಲ್ಲಿರುವ ಮಹಾಪರಿನಿರ್ವಾಣ ದೇವಾಲಯಕ್ಕೆ ಭೇಟಿ ನೀಡಿದ ಅವರು ಬುದ್ಧಪೂರ್ಣಿಮೆಯ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಲಕ್ನೋದಲ್ಲಿ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ ನಿವಾಸಕ್ಕೆ ತೆರಳಿ ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ, ರಾಜ್ಯದ ಸಚಿವರೊಂದಿಗೂ ಮಾತುಕತೆ ನಡೆಸಿದ್ದಾರೆ.

Advertisement

ಸರಣಿ ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ
ಒಂದೇ ದಿನದ ಪ್ರವಾಸವಾಗಿದ್ದರೂ ಪ್ರಧಾನಿ ಮೋದಿ ಅವರು ನೇಪಾಳದಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಬಿಡುವಿಲ್ಲದೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಪ್ರಧಾನಿ ದೇಬಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಅವರು ಲುಂಬಿನಿಯಲ್ಲಿ ಪವಿತ್ರ ಮಾಯಾದೇವಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅವರಿಗೆ ಪ್ರಧಾನಿ ದೇಬಾ ಮತ್ತು ಅವರ ಪತ್ನಿ ಡಾ.ರಾಣಾ ದೇಬಾ ಕೂಡ ಸಾಥ್‌ ನೀಡಿದರು. ದೇಗುಲದ ಆವರಣದಲ್ಲಿ ಬುದ್ಧ ಹುಟ್ಟಿದ ನಿಖರ ಸ್ಥಳ ಎಂದು ಹೇಳಲಾದ ಮರ್ಕರ್‌ ಶಿಲೆಯ ದರ್ಶನ ಮಾಡಿ ಗೌರವ ಸಲ್ಲಿಸಿದರು.

2014ರಲ್ಲಿ ಪ್ರಧಾನಿ ಮೋದಿ ಅವರು ಲುಂಬಿನಿಗೆ ಉಡುಗೊರೆಯಾಗಿ ನೀಡಿದ್ದ ಬುದ್ಧಗಯಾದ ಸಸ್ಯವನ್ನು ಅಲ್ಲೇ ನೆಡಲಾಗಿದ್ದು, ಸೋಮವಾರ ಉಭಯ ಪ್ರಧಾನಿಗಳು ಆ ಸಸ್ಯಕ್ಕೆ ನೀರುಣಿಸಿದರು. ಇದಾದ ಬಳಿಕ ಮೋದಿ ಅವರು ಲುಂಬಿನಿ ಮೊನಾಸ್ಟಿಕ್‌ ವಲಯದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಬುದ್ಧಿಸ್ಟ್‌ ಕಲ್ಚರ್‌ ಆ್ಯಂಡ್‌ ಹೆರಿಟೇಜ್‌ಗೆ ಶಿಲಾನ್ಯಾಸ ನೆರವೇರಿಸಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next