ಬೆಂಗಳೂರು: ಇದೇ 25ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲೂ ರೋಡ್ ಶೋ ನಡೆಸಲಿದ್ದಾರೆ. ಕೆ.ಆರ್.ಪುರ- ವೈಟ್ ಫೀಲ್ಡ್ ಮೆಟ್ರೋ ಮಾರ್ಗದ ಉದ್ಘಾಟನೆಯಲ್ಲಿ ಭಾಗಿಯಾಗಲು ಅವರು ರಾಜ್ಯ ರಾಜಧಾನಿಗೆ ಆಗಮಿಸಲಿದ್ದಾರೆ.
ಮಾ.25ರಂದು ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಅಂದೇ ಬೆಂಗಳೂರಿನಲ್ಲೂ ರೋಡ್ ಶೋ ನಡೆಸುವ ಚಿಂತನೆಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.
ಈಗಾಗಲೇ ಮಂಡ್ಯ, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಪ್ರಧಾನಿ ನಡೆಸಿರುವ ರೋಡ್ ಶೋಗೆ ಉತ್ತಮ ಸ್ಪಂದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಭಾಗದಲ್ಲಿ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ.
ಅಂದು ದೇವನಹಳ್ಳಿ ವೈದ್ಯಕೀಯ ಕಾಲೇಜ್ ಉದ್ಘಾಟನೆ ನಡೆಸಿದ ಬಳಿಕ ಪ್ರಧಾನಿ ಅವರನ್ನು ಮೆಟ್ರೋ ಮಾರ್ಗದ ಉದ್ಘಾಟನೆಗೆ ಕರೆ ತಂದು ಆ ಬಳಿಕ ನಗರದಲ್ಲಿ ರೋಡ್ ಶೋ ನಡೆಸುವ ಲೆಕ್ಕಾಚಾರ ಬಿಜೆಪಿಯದ್ದು.