ಲಕ್ನೋ: ಉತ್ತರಪ್ರದೇಶದ ಜೇವರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ(ನವೆಂಬರ್ 25) ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ:ಕಿಡ್ಸ್ ಫ್ಯಾಷನ್ ಬ್ರ್ಯಾಂಡ್ ಹಾಪ್ ಸ್ಕಾಚ್ ನೊಂದಿಗೆ ಫ್ಲಿಪ್ ಕಾರ್ಟ್ ಪಾಲುದಾರಿಕೆ
“ನೋಯ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತರ ಭಾರತದ ಪ್ರಮುಖ ಸರಕು ಸಾಗಣೆಯ ಕೇಂದ್ರವಾಗಲಿದೆ. ಅಷ್ಟೇ ಅಲ್ಲ ರಾಜ್ಯದ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ. ಅದೇ ರೀತಿ ಪ್ರವಾಸೋದ್ಯಮ, ರಫ್ತು ಮತ್ತು ಉದ್ಯಮ ಕ್ಷೇತ್ರಗಳಿಗೂ ಆದ್ಯತೆ ದೊರೆಯಲಿದೆ” ಎಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನೋಯ್ಡಾ ವಿಮಾನ ನಿಲ್ದಾಣ ನಿರ್ಮಾಣದ ಮೂಲಕ ರಫ್ತು ಹೆಚ್ಚಾಗಲಿದೆ. ರಾಜ್ಯದಲ್ಲಿ ಯುವಕರಿಗೆ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿನ ಪ್ರವಾಸೋದ್ಯಮಕ್ಕೂ ಹೆಚ್ಚಿನ ಲಾಭವಾಗಲಿದೆ ಎಂದು ಪ್ರಧಾನಿ ಹೇಳಿದರು.
ಜೇವರ್ ವಿಮಾನ ನಿಲ್ದಾಣದಿಂದ ದೆಹಲಿಯ ಎನ್ ಸಿಆರ್ ಮತ್ತು ಉತ್ತರಪ್ರದೇಶದ ಕೋಟ್ಯಂತರ ಜನರಿಗೆ ಲಾಭವಾಗಲಿದೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಂತಾರಾಷ್ಟ್ರೀಯ ರಫ್ತು ಮಾರುಕಟ್ಟೆಗೆ ನೇರ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರತಿ ವರ್ಷ ನಾವು ಬೇರೆ ದೇಶಗಳಲ್ಲಿ ವಿಮಾನಗಳ ರಿಪೇರಿಗಾಗಿ 15,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವು. ಈಗ ಎಲ್ಲಾ ರಿಪೇರಿ ಮತ್ತು ನಿರ್ವಹಣೆಯನ್ನು ಇಲ್ಲಿಯೇ ಮಾಡಬಹುದಾಗಿದೆ ಎಂದು ಪ್ರಧಾನಿ ಸಮಾರಂಭದಲ್ಲಿ ವಿವರಿಸಿದರು.