ನವದೆಹಲಿ:ದೇಶದ ಜನರು ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಜತೆಗೆ ಅಂಗಾಂಗ ದಾನ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಒಂದೇ ನಿಯಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
ಭಾನುವಾರ ತಮ್ಮ ಮಾಸಿಕ “ಮನ್ ಕಿ ಬಾತ್’ ಕಾರ್ಯಕ್ರಮದ 99ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ನಿಧನದ ಬಳಿಕ ಅಂಗಾಗ ದಾನ ಮಾಡಿದರೆ ಹಲವರಿಗೆ ಅನುಕೂಲವಾಗಲಿದೆ. ಹಲವರ ಜೀವ ಉಳಿಸಲು ನೆರವಾಗಲಿದೆ. ಈ ಉದ್ದೇಶಕ್ಕಾಗಿ ನಿಗದಿತ ರಾಜ್ಯದಲ್ಲಿಯೇ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮ ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.
2013ರಲ್ಲಿ 5 ಸಾವಿರ ಮಂದಿ ಅಂಗಾಂಗ ದಾನಕ್ಕೆ ನೋಂದಣಿಸಿ ಮಾಡಿಸಿದ್ದರು. 2022ರಲ್ಲಿ ಈ ಸಂಖ್ಯೆ 15 ಸಾವಿರಕ್ಕೇರಿದೆ ಎಂದೂ ಅವರು ತಿಳಿಸಿದ್ದಾರೆ.
ಕೊರೊನಾ ಬಗ್ಗೆ ಇರಲಿ ಎಚ್ಚರ:
ರಂಜಾನ್ ಸೇರಿದಂತೆ ಮುಂದಿನ ದಿನಗಳಲ್ಲಿ ಹಲವು ಹಬ್ಬಗಳು ಬರುತ್ತಿದ್ದು, ಎಲ್ಲರೂ ಕೊರೊನಾ ಮುನ್ನೆಚ್ಚರಿಕೆ ಕ್ರಮ ಪಾಲಿಸಿ ಎಂದೂ ಮೋದಿ ಕರೆ ನೀಡಿದ್ದಾರೆ.
Related Articles
ನಾರಿಶಕ್ತಿಯ ಬಗ್ಗೆ ಪ್ರಶಂಸೆ:
ನಾಗಾಲ್ಯಾಂಡ್ ಚುನಾವಣೆಯಲ್ಲಿ ಮೊದಲ ಬಾರಿಗೆ ಇಬ್ಬರು ಶಾಸಕಿಯರು ಆಯ್ಕೆಯಾಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ಸಾಧನೆ ಎಂದ ಮೋದಿ ಅವರು, ಆಸ್ಕರ್ ಪುರಸ್ಕೃತ “ದ ಎಲಿಫೆಂಟ್ ವಿಸ್ಪರರ್ಸ್’ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಂದೇ ಭಾರತ್ ರೈಲಿಗೆ ಲೋಕೋ ಪೈಲಟ್ (ಚಾಲಕಿ) ಆಗಿರುವ ಸುರೇಖಾ ಯಾದವ್, ಏಷ್ಯಾದ ಮೊದಲ ಲೋಕೋಪೈಲಟ್ ಆಗಿರುವುದು ಹೆಮ್ಮೆಯ ವಿಚಾರ. ಮೂರು ಸಾವಿರ ಗಂಟೆಗಳಷ್ಟು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವ ಅನುಭವ ಇರುವ ಐಎಎಫ್ನ ಗ್ರೂಪ್ ಕ್ಯಾಪ್ಟನ್ ಶೈಲಜಾ ಧಾಮಿ ಅವರು ಮೊದಲ ಬಾರಿಗೆ ಯುದ್ಧ ನಡೆಸುವ ವಿಭಾಗದ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಇದೊಂದು ಶ್ಲಾಘನೀಯ ಸಾಧನೆ ಎಂದರು.
100ರ ಕಾರ್ಯಕ್ರಮಕ್ಕೆ ಸಲಹೆ:
ಮುಂದಿನ ತಿಂಗಳು ಪ್ರಸಾರವಾಗಲಿರುವ “ಮನ್ ಕಿ ಬಾತ್’ನ 100ನೇ ಆವೃತ್ತಿಗೆ ಸಲಹೆ ನೀಡುವಂತೆಯೂ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ಏ.30ರಂದು ಅದು ಪ್ರಸಾರವಾಗಲಿದೆ. 2014ರ ಅ.3ರಂದು ಮೊದಲ ಕಂತು ಪ್ರಸಾರವಾಗಿತ್ತು.