Advertisement

ಭೂಮಂಡಲದಿಂದ ಬ್ರಹ್ಮಾಂಡ; ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಪ್ರಧಾನಿ ಮೋದಿ ಚಾಲನೆ

02:05 AM Oct 12, 2021 | Team Udayavani |

ಹೊಸದಿಲ್ಲಿ: “ಭೂಮಂಡಲದಿಂದ ಬ್ರಹ್ಮಾಂಡದವರೆಗೆ’ (ಭೂಮಂಡಲ್‌ ಸೇ ಬ್ರಹ್ಮಾಂಡ್‌ ತಕ್‌) ಎಂಬ ಧ್ಯೇಯ ದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಬಾಹ್ಯಾಕಾಶ ಸಂಘ (ಇಂಡಿಯನ್‌ ಸ್ಪೇಸ್‌ ಅಸೋಸಿಯೇಶನ್‌)ಕ್ಕೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

Advertisement

ಬಾಹ್ಯಾಕಾಶ ಕ್ಷೇತ್ರದ ಮೂಲಕ 21ನೇ ಶತಮಾನದಲ್ಲಿ ಜಗತ್ತನ್ನು ಒಗ್ಗೂಡಿಸುವ ಮತ್ತು ಸಂಪರ್ಕಿಸುವ ಕೆಲಸ ವನ್ನು ಭಾರತ ಮಾಡಲಿದೆ ಎಂದೂ ಅವರು ಹೇಳಿದ್ದಾರೆ. ಹಿಂದೆಲ್ಲ ಬಾಹ್ಯಾಕಾಶ ವಲಯವು ಕೇವಲ ಸರಕಾರಕ್ಕೆ ಸಂಬಂಧಿಸಿದ್ದಾಗಿತ್ತು. ನಾವು ಆ ಮನಃಸ್ಥಿತಿಯನ್ನು ಬದಲಿಸಿ, ಈ ಕ್ಷೇತ್ರದಲ್ಲೂ ನಾವೀನ್ಯತೆಯನ್ನು ಪರಿಚ ಯಿಸಿ ದ್ದೇವೆ. ನಾವು ಸರಕಾರ ಮತ್ತು ಸ್ಟಾರ್ಟ್‌ಅಪ್‌ಗ್ಳನ್ನು ಒಟ್ಟಿಗೇ ತಂದಿದ್ದೇವೆ. ಹಲವು ಕ್ಷೇತ್ರಗಳನ್ನು ಖಾಸಗಿಗೆ ಮುಕ್ತವಾಗಿಸಿದ್ದು, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸಂಬಂ ಧಪಟ್ಟವರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳು ವುದಕ್ಕೂ ಆದ್ಯತೆ ನೀಡಿದ್ದೇವೆ ಎಂದೂ ಮೋದಿ ಹೇಳಿದ್ದಾರೆ.

ನಷ್ಟದಲ್ಲಿದ್ದ ಸರಕಾರಿಸ್ವಾಮ್ಯದ ಏರ್‌ಇಂಡಿಯಾವನ್ನು ಯಶಸ್ವಿಯಾಗಿ ಖಾಸಗಿ ಕಂಪೆನಿಗೆ ಒಪ್ಪಿಸಿರುವುದನ್ನು ಉದಾಹರಣೆಯಾಗಿ ನೀಡಿದ ಮೋದಿ, “ಇದು ನಮ್ಮ ಸರಕಾರದ ಬದ್ಧತೆ ಮತ್ತು ಗಂಭೀರತೆಗೆ ಸಾಕ್ಷಿ. ಈ ರೀತಿಯ ದೃಢ ನಿರ್ಧಾರಗಳನ್ನು ಕೈಗೊಳ್ಳುವ ಸರಕಾರ ವನ್ನು ಭಾರತ ಹಿಂದೆಂದೂ ನೋಡಿರಲಿಲ್ಲ’ ಎಂದೂ ಹೇಳಿದ್ದಾರೆ. ಬಾಹ್ಯಾ ಕಾಶ ವಲಯದ ಸುಧಾರಣೆಯು 4 ಸ್ತಂಭಗಳನ್ನು ಆಧರಿಸಿದೆ. ಅವೆಂದರೆ ಖಾಸಗಿ ಕ್ಷೇತ್ರಕ್ಕೂ ನಾವೀನ್ಯತೆ ಮತ್ತು ಸಂಶೋಧನೆಯ ಸ್ವಾತಂತ್ರ್ಯ, ಎಲ್ಲವನ್ನೂ ಸಾಧ್ಯವಾಗಿಸುವ ನಿಟ್ಟಿನಲ್ಲಿ ಸರಕಾರದ ಪಾತ್ರ, ಭವಿಷ್ಯಕ್ಕಾಗಿ ಯುವಜನರ ತಯಾರಿ ಮತ್ತು ಬಾಹ್ಯಾಕಾಶ ವಲಯವನ್ನು ಜನಸಾಮಾನ್ಯನ ಅಭಿವೃದ್ಧಿಯ ಸಾಧನ ವಾಗಿ ನೋಡುವುದು ಎಂದಿದ್ದಾರೆ ಮೋದಿ.

ಏನಿದು ಭಾರತೀಯ ಬಾಹ್ಯಾಕಾಶ ಸಂಸ್ಥೆ?
ಸ್ಪೇಸ್‌ ಅಸೋಸಿಯೇಶನ್‌ ಎನ್ನುವುದು ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದ ಕೈಗಾರಿಕ ಸಂಸ್ಥೆಯಾಗಿದ್ದು, ಇಸ್ರೋ, ಭಾರ್ತಿ ಏರ್‌ಟೆಲ್‌, ಲಾರ್ಸನ್‌ ಆ್ಯಂಡ್‌ ಟಬ್ರೋ, ಒನ್‌ವೆಬ್‌, ಟಾಟಾ ಸಮೂಹದ ನೆಲ್ಕೋ, ಮ್ಯಾಪ್‌ ಮೈ ಇಂಡಿಯಾ, ಅಗ್ನಿಕುಲ್‌, ಧ್ರುವ ಸ್ಪೇಸ್‌ ಮತ್ತು ಕಾವಾ ಸ್ಪೇಸ್‌ನಂಥ ಕಂಪೆನಿಗಳೂ ಇದರಲ್ಲಿ ಒಳಗೊಂಡಿವೆ. ಇದರ ನೇತೃತ್ವವನ್ನು ನಿವೃತ್ತ ಲೆ|ಜ| ಎ.ಕೆ. ಭಟ್‌ ವಹಿಸಲಿದ್ದು, ಅವರು ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫ‌ಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ

Advertisement

ಇದು ಏಕೆ ಮುಖ್ಯ?
ಇಷ್ಟು ವರ್ಷಗಳಲ್ಲಿ ಭಾರತ ಮಾಡಿರುವ ಎಲ್ಲ ಬಾಹ್ಯಾಕಾಶ ಸಾಧನೆಗಳ ಹಿಂದೆ ಇದ್ದಿದ್ದು ಇಸ್ರೋ ಮಾತ್ರ. ಆದರೆ ಈಗ ಅಮೆರಿಕದ ಮಾದರಿಯಲ್ಲೇ ಖಾಸಗಿ ಕಂಪೆನಿಗಳನ್ನೂ ಈ ಕ್ಷೇತ್ರದತ್ತ ಕರೆತರುವುದು ಸರಕಾರದ ಉದ್ದೇಶ. ಇದರಿಂದ ತಂತ್ರಜ್ಞಾನ ಸುಧಾರಣೆ, ಸ್ವಾವಲಂಬನೆ ಸಾಧ್ಯ. ಈಗಾಗಲೇ ಹಲವು ವಿದೇಶಿ ಹಾಗೂ ದೇಶೀಯ ಖಾಸಗಿ ಕಂಪೆನಿಗಳು ಭಾರತದ ಬಾಹ್ಯಾಕಾಶ ವಲಯಕ್ಕೆ ಪ್ರವೇಶ ಪಡೆಯಲು ಆಸಕ್ತಿ ತೋರಿವೆ.

ಬಾಹ್ಯಾಕಾಶ ಆಧಾರಿತ ಸಂವಹನ ಜಾಲ ಹೇಗೆ ಬೆಳೆಯುತ್ತಿದೆ?
ದೇಶದ ಮೂಲೆ ಮೂಲೆಗೂ ಅಂತರ್ಜಾಲ ಸಂಪರ್ಕ ಕಲ್ಪಿಸಬೇಕೆಂದರೆ ಉಪಗ್ರಹ ಆಧಾರಿತ ಅಂತರ್ಜಾಲ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಭಾರತ ಮತ್ತು ವಿದೇಶಿ ಕಂಪೆನಿಗಳು ಉಪಗ್ರಹ ಸಂವಹನ ವ್ಯವಸ್ಥೆ ಮೇಲೆ ಗಮನ ಕೇಂದ್ರೀಕರಿಸಿವೆ. ಉದಾ- ಒನ್‌ವೆಬ್‌ ಸಂಸ್ಥೆಯು ಭೂ ಮೇಲ್ಮೆಗೆ ಸಮೀಪದ ಕಕ್ಷೆಯಲ್ಲಿ ಸುತ್ತುವ 648 ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ 322 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ. ಸ್ಟಾರ್‌ಲಿಂಕ್‌ ಮತ್ತು ಅಮೆಜಾನ್‌ ಸಂಸ್ಥೆಗಳು ಕೂಡ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆ ಒದಗಿಸಲು ಲೈಸೆನ್ಸ್‌ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದೆ. ಸ್ಪೇಸ್‌ ಎಕ್ಸ್‌ ಕೂಡ 12,000 ಉಪಗ್ರಹಗಳ ನೆಟ್‌ವರ್ಕ್‌ ಸೃಷ್ಟಿಸಲು ಚಿಂತನೆ ನಡೆಸಿದೆ.

ಜನಸಾಮಾನ್ಯನ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಪ್ರಜಾತಾಂತ್ರಿಕ ವ್ಯವಸ್ಥೆಯನ್ನಾಗಿ ಮಾರ್ಪಾಡು ಮಾಡಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಈ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿ ಸರಕಾರದ್ದು.
-ಜಿತೇಂದ್ರ ಸಿಂಗ್‌, ಕೇಂದ್ರ ಸಚಿವ

ದೇಶದ ಸಶಸ್ತ್ರ ಪಡೆಗಳ ಕಾರ್ಯನಿರ್ವ ಹಣ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಖಾಸಗಿ ಕಂಪೆನಿಗಳು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಒದಗಿಸಬೇಕು.
– ಬಿಪಿನ್‌ ರಾವತ್‌,
ರಕ್ಷಣ ಪಡೆಗಳ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next