ಮುಂಬೈ: “ಸ್ವಾತಂತ್ರ್ಯಾನಂತರದ ಇದೇ ಮೊದಲ ಬಾರಿಗೆ “ನವಭಾರತ’ಕ್ಕೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮತ್ತು ಅದನ್ನು ಸಾಕಾರಗೊಳಿಸುವ ಧೈರ್ಯ ಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಹಾರಾಷ್ಟ್ರದಲ್ಲಿ ಗುರುವಾರ 38 ಸಾವಿರ ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಶತಮಾನದ ದೀರ್ಘಾವಧಿಯು ಕೇವಲ ಬಡತನದ ಬಗ್ಗೆ ಮಾತನಾಡುತ್ತಾ, ವಿದೇಶಿಯರಿಂದ ಸಾಲ ಪಡೆಯುತ್ತಾ ಕಳೆದುಹೋಯಿತು. ಆದರೆ, ಈಗ ದೇಶದ ಹಲವು ನಗರಗಳು ಪ್ರಗತಿಯ ಪಥದತ್ತ ಸಾಗುತ್ತಿವೆ. ಅದರಂತೆಯೇ, ಮುಂಬೈಯನ್ನು ಭವಿಷ್ಯಕ್ಕೆ ಸನ್ನದ್ಧಗೊಳಿಸುವ ಸಂಕಲ್ಪವನ್ನು ನಮ್ಮ ಡಬಲ್ ಎಂಜಿನ್ ಸರ್ಕಾರ ಹೊಂದಿದೆ ಎಂದೂ ಮೋದಿ ಹೇಳಿದರು.
ಇನ್ನು ಕೆಲವೇ ವರ್ಷಗಳಲ್ಲಿ ಮುಂಬೈ ಸಂಪೂರ್ಣವಾಗಿ ಬದಲಾಗಲಿದೆ. ಜಗತ್ತಿನ ಅತಿದೊಡ್ಡ ಆರ್ಥಿಕತೆಗಳೆಲ್ಲ ಬಿಕ್ಕಟ್ಟಿನಲ್ಲಿ ನಲುಗಿಹೋಗಿದ್ದರೆ, ಭಾರತ ಮಾತ್ರ 80 ಕೋಟಿ ಮಂದಿಗೆ ಉಚಿತ ಪಡಿತರ ಒದಗಿಸುತ್ತಿದೆ. ಜಾಗತಿಕ ಹಿಂಜರಿತದ ನಡುವೆಯೂ ಮೂಲಸೌಕರ್ಯದ ಮೇಲೆ ಬಂಡವಾಳ ಹೂಡಿಕೆ ಮಾಡುತ್ತಿದೆ. ಇದು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವತ್ತ ನಮ್ಮ ಬದ್ಧತೆಯನ್ನು ತೋರಿಸಿದೆ ಎಂದೂ ಪ್ರಧಾನಿ ನುಡಿದರು.
ಶಿಂಧೆ-ಫಡ್ನಿವೀಸ್ ಜೋಡಿ ಬಗ್ಗೆ ಪ್ರಸ್ತಾಪ:
Related Articles
ಮುಂಬೈನಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾ ಸಿದ ಪ್ರಧಾನಿ ಮೋದಿ, “ಸಿಎಂ ಏಕನಾಥ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ಜೋಡಿಯು ಮಹಾರಾಷ್ಟ್ರದ ಜನರ ಕನಸನ್ನು ನನಸು ಮಾಡುತ್ತಿದೆ. ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಗೆ ವೇಗ ಸಿಕ್ಕಿದೆ. ಎನ್‌ಡಿಎ ಅಥವಾ ಬಿಜೆಪಿ ಸರ್ಕಾರ ಯಾವತ್ತೂ ಅಭಿವೃದ್ಧಿಯ ನಡುವೆ ರಾಜಕೀಯ ತೂರದಂತೆ ನೋಡಿಕೊಳ್ಳುತ್ತದೆ’ ಎಂದೂ ಹೇಳಿದರು.
38,000 ಕೋಟಿ ರೂ. ಯೋಜನೆಗಳ ಉಡುಗೊರೆ:
ಮುಂಬೈನಲ್ಲಿ ಮೂಲಸೌಕರ್ಯ, ನಗರ ಪ್ರಯಾಣ, ಆರೋಗ್ಯಸೇವೆ ಸೇರಿದಂತೆ ಬರೋಬ್ಬರಿ 38 ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದರು. ಮುಂಬೈ ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದ್ದು, ರಾಜಕೀಯ ವೈರಿಗಳ ವಿರುದ್ಧ “ಅಭಿವೃದ್ಧಿ’ ಅಸ್ತ್ರ ಪ್ರಯೋಗಿಸಲು ಶಿಂಧೆ ಸರ್ಕಾರಕ್ಕೆ ಇದು ನೆರವಾಗಲಿದೆ. 12,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮುಂಬೈ ಮೆಟ್ರೋದ 2ಎ ಮತ್ತು 7 ಲೈನ್‌ಗಳನ್ನು ಮೋದಿ ಉದ್ಘಾಟಿಸಿದರು. 7 ತ್ಯಾಜ್ಯ ಸಂಸ್ಕರಣೆ ಸ್ಥಾವರಗಳು, ಒಂದು ರಸ್ತೆ ಕಾಂಕ್ರೀಟ್ ಯೋಜನೆ, ಛತ್ರಪತಿ ಶಿವಾಜಿ ಮಹರಾಜ್ ಟರ್ಮಿನಸ್ ನವೀಕರಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. 20 ಆರೋಗ್ಯ ಕ್ಲಿನಿಕ್‌ಗಳಿಗೂ ಚಾಲನೆ ನೀಡಿದರು. ನಂತರ ಮೆಟ್ರೋದಲ್ಲಿ ಪ್ರಯಾಣಿಸಿದ ಮೋದಿ, ಒಳಗಿದ್ದ ಯುವಜನರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದೂ ಕಂಡುಬಂತು.