ನವದೆಹಲಿ:ರಜೆ ಮುಗಿಸಿ ದೇಶ ಸೇವೆಯ ಕಾರ್ಯಕ್ಕೆ ತೆರಳುತ್ತಿದ್ದ ಸಿಆರ್ ಪಿಎಫ್ ಯೋಧರ ಮೇಲೆ ಜೈಶ್ ಉಗ್ರರು ದಾಳಿ ನಡೆಸಿದ ಪರಿಣಾಮ 42 ಯೋಧರು ಹುತಾತ್ಮರಾದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ವಿನಾಶದ ಹಾದಿಯಲ್ಲಿ ಸಾಗುತ್ತಿದೆ. ಪಾಕಿಸ್ತಾನ ಭಾರತ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಆದರೆ ಆ ಕನಸು ಎಂದಿಗೂ ಯಶಸ್ವಿಯಾಗುವುದಿಲ್ಲ. ಯಾರು ಈ ದಾಳಿಗೆ ಕುಮ್ಮಕ್ಕು ನೀಡಿದ್ದಾರೋ ಅವರಿಗೆ ಭಾರತ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ನಡೆದ ಪಾಕಿಸ್ತಾನದ ಹೇಯಕೃತ್ಯದ ಕುರಿತಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ನಮ್ಮ ವಿರುದ್ಧ ಸಂಚು ಮಾಡುವವರು ಯಾವತ್ತೂ ಸಫಲರಾಗಲ್ಲ. ಈ ಸಮಯದಲ್ಲಿ ತಾಳ್ಮೆ ಅವಶ್ಯಕ. ನನಗೆ ತಿಳಿದಿದೆ ಈ ಘಟನೆಯಿಂದ ದೇಶದ ಜನರು ಆಕ್ರೋಶಗೊಂಡಿದ್ದಾರೆ, ಎಲ್ಲರ ರಕ್ತ ಕುದಿಯತೊಡಗಿದೆ. ಇದರ ಹಿಂದೆ ಯಾರಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದರು.
ಭಯೋತ್ಪಾದಕ ಸಂಘಟನೆಗಳು ದೊಡ್ಡ ತಪ್ಪು ಮಾಡಿವೆ. ನಾವು ವೀರ ಯೋಧರ ಮರಣಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಈ ಬಗ್ಗೆ ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮಗೆ ನಮ್ಮ ಸೇನೆಯ ಧೈರ್ಯ, ಶೌರ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.