ಗುರೇಜ್/ನವದೆಹಲಿ: ಪ್ರಧಾನಿಯಾದ ನಂತರ ಪ್ರತಿ ದೀಪಾವಳಿಯನ್ನೂ ಸೈನಿಕರ ಜತೆಯೇ ಆಚರಿಸಿಕೊಳ್ಳುವ ಸಂಪ್ರದಾಯ ಪಾಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ವರ್ಷದ ದೀಪಾವಳಿಯನ್ನೂ ಯೋಧರ ಜತೆಯಲ್ಲೇ ಆಚರಿಸಿಕೊಂಡಿದ್ದಾರೆ. ಭಾರತ ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಯ ಬದಿಯಲ್ಲಿರುವ ಬಂಡಿಪೋರಾ ಪ್ರಾಂತ್ಯದಲ್ಲಿನ ಗುರೇಜ್ ಸೇನಾ ನೆಲೆಗೆ ಗುರುವಾರ ಸುಮಾರು 2 ಗಂಟೆಗಳ ಕಾಲ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಯೋಧರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡರು.
ಎಲ್ಲಾ ಯೋಧರಿಗೂ ಸಿಹಿ ಹಂಚಿ ಮಾತನಾಡಿದ ಅವರು, “”ಯೋಧರೊಂದಿಗಿನ ದೀಪಾವಳಿ ತಮ್ಮ ಕುಟುಂಬದ ಸದಸ್ಯೊರೊಂದಿಗಿನ ದೀಪಾವಳಿ ಎಂದು ಬಣ್ಣಿಸಿದರಲ್ಲದೆ, ದೇಶದ 125 ಕೋಟಿ ಜನರು ನೆಮ್ಮದಿಯಿಂದ ಹಬ್ಬ ಆಚರಿಸಲು ನೀವು ಕಾರಣ. ನಿಮ್ಮ ಕನಸುಗಳು, ಜವಾಬ್ದಾರಿಗಳ ಹೊಣೆ ನಮ್ಮದು” ಎಂದರು.
ಇದೇ ವೇಳೆ, ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಧರ ಶ್ರಮ ಹಾಗೂ ತ್ಯಾಗಗಳನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳು ಪ್ರಧಾನಿ ಜತೆಗಿದ್ದರು. ಆನಂತರ, ಅತಿಥಿಗಳ ಅಭಿಪ್ರಾಯದ ಪುಸ್ತಕದಲ್ಲಿ ತಮ್ಮ ಭೇಟಿಯ ಕುರಿತು ಬರೆದ ಮೋದಿ, “”ತಮ್ಮ ಬಂಧು, ಬಳಗ ಬಿಟ್ಟು ಬಂದು ಗಡಿ ಕಾಯುತ್ತಿರುವ ಯೋಧರು, ತ್ಯಾಗ, ಪರಾಕ್ರಮಗಳ ಪ್ರತೀಕ ಎಂದಿದ್ದಾರೆ.
ಕಾಶ್ಮೀರದಲ್ಲಿನ ಸೇನಾನಿಗಳ ಜತೆಗೆ ಪ್ರಧಾನಿ ಹೀಗೆ ದೀಪಾವಳಿ ಆಚರಿಸುತ್ತಿರುವುದು ಇದು ಎರಡನೇ ಬಾರಿ. 2014ರಲ್ಲಿ ಪ್ರಧಾನಿಯಾಗಿ ಅವರ ಮೊದಲ ವರ್ಷದ ದೀಪಾವಳಿ ವೇಳೆ, ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಹೆಸರಾಗಿರುವ ಸಿಯಾಚಿನ್‌ಗೆ ಭೇಟಿ ನೀಡಿ ಅಲ್ಲಿನ ಯೋಧರೊಂದಿಗೆ ಕೆಲ ಕಾಲ ಕಳೆದಿದ್ದರು. ಆ ಹೊತ್ತಿಗೆ, ಶತಮಾನ ಕಂಡ ಭೀಕರ ಪ್ರವಾಹಕ್ಕೆ ಸಿಲುಕಿದ್ದ ಜಮ್ಮು-ಕಾಶ್ಮೀರಕ್ಕೆ 570 ಕೋಟಿ ರು. ಪರಿಹಾರದ ಪ್ಯಾಕೇಜನ್ನು ಘೋಷಿಸಿದ್ದರು. 2015ರ ದೀಪಾವಳಿಯನ್ನು ಪಂಜಾಬ್‌ನಲ್ಲಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಸೇನಾ ಶಿಬಿರದಲ್ಲಿ ಆಚರಿಸಿದ್ದರು. 2016ರಲ್ಲಿ ಹಿಮಾಚಲ ಪ್ರದೇಶದ ಸೇನಾ ಶಿಬಿರದಲ್ಲಿ ಆಚರಿಸಿಕೊಂಡಿದ್ದರು.