ಚಿತ್ತೋರ್‌ಗಢ : ‘ಕಾಂಗ್ರೆಸ್ ಆರಂಭಿಸಿರುವ ಯೋಜನೆಗಳನ್ನು ನಿಲ್ಲಿಸಬೇಡಿ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದು, ಈ ಮೂಲಕ ಅವರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಚಿತ್ತೋರ್‌ಗಢದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ಯಾವುದೇ ಯೋಜನೆಯನ್ನು ನಿಲ್ಲಿಸುವುದಿಲ್ಲ ಆದರೆ ಅದನ್ನು ಸುಧಾರಿಸಲು ಮಾತ್ರ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು.ಚುನಾವಣ ಕಣದಲ್ಲಿರುವ ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿಯ ಮುಖವನ್ನು ಬಿಂಬಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ನೀಡಿ, ಬಿಜೆಪಿಯು ಪಕ್ಷದ ಚಿಹ್ನೆಯಾದ ಕಮಲದ ಮೇಲೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಸೇರಿದಂತೆ ಬಿಜೆಪಿ ಮುಖಂಡರು ರ‍್ಯಾಲಿಯಲ್ಲಿ ಉಪಸ್ಥಿತರಿದ್ದರು.
“ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಪ್ರಾರಂಭವಾಗಿದೆ ಎಂದು ಗೆಹ್ಲೋಟ್‌ಗೆ ತಿಳಿದಿದೆ. ಯೋಜನೆಗಳನ್ನು ನಿಲ್ಲಿಸಬಾರದು ಎಂದು ಸಾರ್ವಜನಿಕವಾಗಿ ವಿನಂತಿಸುವ ಮೂಲಕ ಅವರು ಒಂದು ರೀತಿಯಲ್ಲಿ ಬಿಜೆಪಿಯನ್ನು ಅಭಿನಂದಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಯೋಜನೆಯನ್ನು ಬಿಜೆಪಿ ನಿಲ್ಲಿಸುವುದಿಲ್ಲ ಆದರೆ ಅದನ್ನು ಸುಧಾರಿಸಲು ಪ್ರಯತ್ನಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಮೋದಿಯವರ ಗ್ಯಾರಂಟಿ” ಎಂದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಮೋದಿ ಭರವಸೆ ನೀಡಬೇಕು’ ಎಂದು ಗೆಹ್ಲೋಟ್ ಇತ್ತೀಚೆಗೆ ಒತ್ತಾಯಿಸಿದ್ದರು.
ರಾಜಸ್ಥಾನದಲ್ಲಿ ಬಿಜೆಪಿಯಿಂದ ರಾಜೇ ಅವರನ್ನು ಮುಖ್ಯಮಂತ್ರಿ ಮುಖ ಎಂದು ಘೋಷಿಸಲಾಗುತ್ತದೆಯೇ ಎಂಬ ಊಹಾಪೋಹಗಳು ಹೆಚ್ಚಾಗಿವೆ.