ಅಹಮದಾಬಾದ್: ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿಯಿಂದ ಗುಜರಾತ್ ನಲುಗಿ ಹೋಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜುಲೈ 11) ಗುಜರಾತ್ ಮುಖ್ಯಮಂತ್ರಿ ರಜನಿಕಾಂತ್ ಪಟೇಲ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಕೇಂದ್ರ ಸರ್ಕಾರದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ:ಭದ್ರತಾ ಪಡೆಯ ಎನ್ ಕೌಂಟರ್ ಗೆ ಇಬ್ಬರು ಉಗ್ರರ ಸಾವು,ಶೋಧ ಕಾರ್ಯ ಮುಂದುವರಿಕೆ
ಭಾರೀ, ಮಳೆಯಿಂದ ಗುಜರಾತ್ ನ ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಅಂದಾಜು 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಜಲಾವೃತಗೊಂಡ ಪ್ರದೇಶದಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ ಡಿಆರ್ ಎಫ್ ತಂಡ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈವರೆಗೆ ವಿವಿಧ ಭಾಗದಿಂದ 2,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೇವಲ ನಾಲ್ಕು ಗಂಟೆಗಳಲ್ಲಿ ಭಾರೀ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಹಮದಾಬಾದ್ ನಲ್ಲಿ ದಾಖಲೆ ಪ್ರಮಾಣದ ಮಳೆ:
ರಾಜಧಾನಿ ಅಹಮದಾಬಾದ್ ನಲ್ಲಿ ಭಾನುವಾರ ಕೇವಲ 3ಗಂಟೆಗಳಲ್ಲಿಯೇ 115 ಮಿಲಿ ಮೀಟರ್ ದಾಖಲೆ ಪ್ರಮಾಣದಲ್ಲಿ ಮಳೆಯಾಗಿತ್ತು. ಇದು ಕಳೆದ ಐದು ವರ್ಷಗಳಲ್ಲಿ ಒಂದೇ ದಿನ ಸುರಿದ ದಾಖಲೆ ಪ್ರಮಾಣದ ಮಳೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮುಂದಿನ 24ಗಂಟೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಎಚ್ಚರಿಕೆ ನೀಡಿದೆ. ಕೆಲವು ಪ್ರದೇಶಗಳಲ್ಲಿ ನೆಲ ಅಂತಸ್ತು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಕೆಲವರು ಮನೆಯ ಟೆರೆಸ್ ಗೆ ಬಲವಂತವಾಗಿ ಕಳುಹಿಸಲಾಗಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ಹೇಳಿದೆ.