Advertisement

ದೇಶದ ಅಭಿವೃದ್ಧಿಗೆ ವಿದ್ಯುತ್‌ ಕೊಡುಗೆ ಅಗಾಧ: ಪ್ರಧಾನಿ ಮೋದಿ

08:38 PM Jul 30, 2022 | Team Udayavani |

ನವದೆಹಲಿ: “ಭಾರತದ ಮುಂದಿನ 25 ವರ್ಷಗಳ ಏಳಿಗೆಯಲ್ಲಿ ವಿದ್ಯುತ್‌ ಕ್ಷೇತ್ರದ ಕೊಡುಗೆ ಅಗಾಧವಾಗಿರಲಿದೆ’ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

Advertisement

ಶನಿವಾರದಂದು ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌ನ “ಉಜ್ವಲ್‌ ಭಾರತ್‌ ಉಜ್ವಲ್‌ ಭವಿಷ್ಯ-ಪವರ್‌ ಅಟ್‌ 2047′ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಈ ಮಾತನ್ನಾಡಿದ್ದಾರೆ.

“ಜನರ ಜೀವನವನ್ನು ಸುಲಭಗೊಳಿಸಲು ವಿದ್ಯುತ್‌ ಕ್ಷೇತ್ರವನ್ನು ಶಕ್ತಿಯುತಗೊಳಿಸುವುದು ಬಹುಮುಖ್ಯವಾಗುತ್ತದೆ. ಈಗ ನಾವು ಆರಂಭಿಸುತ್ತಿರುವ ಯೋಜನೆಗಳು ಈ ಕ್ಷೇತ್ರಕ್ಕೆ ಮತ್ತು ಇದರ ಕಂಪನಿಗಳಿಗೆ ಬಲ ತುಂಬಲಿವೆ’ ಎಂದಿದ್ದಾರೆ ಪ್ರಧಾನಿ ಮೋದಿ.

ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಇದು ಉಜ್ವಲ ಭಾರತ್‌, ಉಜ್ವಲ ಭವಿಷ್ಯ ಯೋಜನೆಯ ಅಂತಿಮ ಹಂತವಾಗಿದ್ದು, ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಯೋಜನೆಯಡಿ, ದೇಶದಲ್ಲಿ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಿಗೆ (ಡಿಸ್ಕಾಂಗಳಿಗೆ) ಆರ್ಥಿಕ ಸಹಕಾರ ಸಿಗಲಿದೆ. ಇದೇ ವೇಳೆ, ಮೋದಿಯವರು ಎನ್‌ಟಿಪಿಸಿಯ ವಿವಿಧ ಹಸಿರು ಶಕ್ತಿ ಯೋಜನೆಗಳಿಗೂ ಚಾಲನೆ ನೀಡಿದರು. ನ್ಯಾಷನಲ್‌ ಸೋಲಾರ್‌ ರೂಫ್ಟಾಪ್‌ ಪೋರ್ಟಲ್‌ನ್ನೂ ಉದ್ಘಾಟಿಸಿದರು.

ನ್ಯಾಯಾಂಗವನ್ನು ಹೊಗಳಿದ ಮೋದಿ:
ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುತ್ತಿರುವುದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ವಿಜ್ಞಾನ ಭವನದಲ್ಲಿ ಶನಿವಾರ ನಡೆದ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ನ್ಯಾಯಾಂಗ ವ್ಯವಸ್ಥೆಯು ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದಿದ್ದಾರೆ.

Advertisement

ಬಾಕಿ ಶುಲ್ಕ ಕಟ್ಟಿ: ರಾಜ್ಯಗಳಿಗೆ ಮೋದಿ ಸೂಚನೆ
ರಾಜ್ಯ ಸರ್ಕಾರಗಳು ವಿದ್ಯುತ್‌ ಉತ್ಪಾದನಾ ಮತ್ತು ವಿತರಣೆ ಸಂಸ್ಥೆಗಳಿಗೆ ಬಾಕಿಯುಳಿಸಿಕೊಂಡಿರುವ 2.5 ಲಕ್ಷ ಕೋಟಿ ರೂ. ಪಾವತಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ.

ಹಾಗೆಯೇ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳು ಕೊಡಬೇಕಾಗಿರುವ 75,000 ಕೋಟಿ ರೂ. ಇನ್ನೂ ಬಾಕಿಯಿದ್ದು, ಅದನ್ನೂ ಆದಷ್ಟು ಬೇಗ ಕೊಡಬೇಕೆಂದು ಪ್ರಧಾನಿ ಸೂಚಿಸಿದ್ದಾರೆ.

“ಉಜ್ವಲ ಭಾರತ್‌ ಉಜ್ವಲ ಭವಿಷ್ಯ’ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ. “ದೇಶದಲ್ಲಿ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಕಳೆದ 8 ವರ್ಷಗಳಲ್ಲಿ 1,70,000 ಮೆಗಾ ವ್ಯಾಟ್‌ ಹೆಚ್ಚಿದೆ. ಸೌರಶಕ್ತಿ ಬಳಕೆಯ ದೇಶಗಳ ಟಾಪ್‌ 4-5 ಸ್ಥಾನಗಳಲ್ಲಿ ಭಾರತವೂ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next