ಚಿತ್ರದುರ್ಗ: ಕರ್ನಾಟಕದ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ. ಈ ಸರ್ಕಾರದ ರಿಮೋಟ್ ಕಂಟ್ರೋಲ್ ಡಜನ್ ಜನರ ಕೈಯಲ್ಲಿ ಇದೆ. ಸೋತ ಎರಡೂ ಪಕ್ಷಗಳೂ ಸೇರಿಕೊಂಡು ಶಕ್ತಿ, ಸ್ವಾರ್ಥಕ್ಕಾಗಿ ಸಮ್ಮಿಶ್ರ ಸರ್ಕಾರ ರಚಿಸಿಕೊಂಡಿವೆ. ಇಂತಹ ಮಹಾಮಿಲಾವತ್ ಸರ್ಕಾರ ದೆಹಲಿಯಲ್ಲಿ ಕುಳಿತರೆ ಹೇಗಾಗುತ್ತೆ? ಕಾಂಗ್ರೆಸ್, ಜೆಡಿಎಸ್ ಪಕ್ಷ ರೈತರ ಒಳಿತನ್ನು ಬಯಸುತ್ತಿಲ್ಲ. ಕರ್ನಾಟಕದಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಿ ಒಂದು ವರ್ಷವಾಯ್ತು. ಆದರೆ ಇನ್ನೂ ಸಾಲಮನ್ನಾ ಆಗಿಲ್ಲ, ರೈತರಿಗೆ ವಾರಂಟ್ ಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.
ಮಂಗಳವಾರ ಮಧ್ಯಾಹ್ನ ಕೋಟೆನಾಡಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ನವಭಾರತದ ನಿರ್ಮಾಣಕ್ಕೆ ಎಲ್ಲಾ ರೀತಿಯಿಂದಲೂ ಶ್ರಮಿಸುತ್ತೇವೆ. ನಮ್ಮ ಗುರಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದು. ರೈತರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದೇವೆ ಎಂದರು.
ನಾವು ಉಗ್ರರ ಮೇಲೆ ದಾಳಿ ಮಾಡಿದ್ದು ಸರಿಯೋ ತಪ್ಪೋ. ನಾವು ದಾಳಿ ಮಾಡಿದ್ದರಿಂದ ನೋವಾಗಿದ್ದು ಪಾಕಿಸ್ತಾನದವರಿಗೆ ಆದರೆ ಕಣ್ಣೀರು ಹಾಕಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ನವರು. ನಾನು ಮುಖ್ಯಮಂತ್ರಿಯವರಿಗೆ ಒಂದು ಮಾತು ಕೇಳುತ್ತೇನೆ, ನಿಮ್ಮ ವೋಟ್ ಬ್ಯಾಂಕ್ ಇರುವುದು ಭಾರತದಲ್ಲೋ, ಪಾಕಿಸ್ತಾನದಲ್ಲೋ ಎಂದು ಪ್ರಶ್ನಿಸಿದರು.