Advertisement

20 ಸಾವಿರ ಗರ್ಭಿಣಿಯರಿಗೆ ಪಿಎಂ ಮಾತೃವಂದನಾ ನೆರವು

02:51 PM Sep 09, 2020 | Suhan S |

ಹುಬ್ಬಳ್ಳಿ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಸಾವಿರಾರು ಗರ್ಭಿಣಿಯರಿಗೆ ಸಹಕಾರಿಯಾಗಿದ್ದು, ಹು-ಧಾ ನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ವಿಭಾಗದಲ್ಲಿ ಸುಮಾರು 20 ಸಾವಿರ ಫಲಾನುಭವಿಗಳು ಲಾಭ ಪಡೆದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಜನವರಿ 2017ರಿಂದ ಆರಂಭಗೊಂಡ ಯೋಜನೆಯಲ್ಲಿ ಅವಳಿನಗರದಲ್ಲಿ ಗರ್ಭಿಣಿಯರು ಅರ್ಜಿ ಸಲ್ಲಿಸಿದ್ದು, ಯೋಜನೆ ಆರಂಭವಾದಾಗಿನಿಂದಇಲ್ಲಿಯವರೆಗೆ 16507 ಲಾಭ ಪಡೆದಿದ್ದಾರೆ.

Advertisement

ಮಹಾನಗರ ವ್ಯಾಪ್ತಿಯಲ್ಲಿನ 67 ವಾರ್ಡ್‌ಗಳಲ್ಲಿನ 432 ಅಂಗನವಾಡಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದ್ದರು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಬಾರಿಗೆ ಗರ್ಭಿಣಿಯಾದಾಗ ಮಾತ್ರ ಈ ಯೋಜನೆ ಉಪಯೋಗ ಪಡೆಯಬಹುದಾಗಿದ್ದು, ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನೀಡುವ ತಾಯಿ ಕಾರ್ಡ್‌ ಸೇರಿದಂತೆ ಸಮರ್ಪಕ ದಾಖಲೆಗಳನ್ನು ಅಂಗನವಾಡಿ ಕೇಂದ್ರದ ಮೂಲಕ ಇಲಾಖೆಗೆ ಕಳುಹಿಸಲಾಗುತ್ತದೆ. ನೀಡಿರುವ ದಾಖಲೆಗಳನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದಲ್ಲಿ ಅವರ ಖಾತೆ ಮೂರು ಹಂತಗಳಲ್ಲಿ ಹಣ ಜಮಾವಣೆ ಮಾಡಲಾಗುತ್ತದೆ.

ಮೊದಲ ಹಂತದಲ್ಲಿ ಗರ್ಭಿಣಿ 150 ದಿನಗಳ ಪೂರೈಸಿ ಇಲಾಖೆಗೆ ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ಖಾತೆಗೆ 1 ಸಾವಿರ ರೂ.ಗಳ ಜಮೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಗರ್ಭಿಣಿ 6 ತಿಂಗಳ ಪೂರ್ಣಗೊಂಡ 2 ಸಾವಿರ ನಗರದ ಜಮೆ ಮಾಡಲಾಗುತ್ತದೆ. 3ನೇ ಹಂತದ ಹಣವನ್ನು ಮಗು ಜನನದ ನಂತರ ಮಗುವಿಗೆ ಮೂರನೇ ಚುಚುಮದ್ದು ಹಾಕಿಸಿರುವ ಮಾಹಿತಿ ನೀಡಿದನಂತರ 2 ಸಾವಿರ ನಗದು ಅವರ ಖಾತೆಗೆ ಜಮೆಮಾಡಲಾಗುತ್ತದೆ. ಮೂರು ಹಂತಗಳಲ್ಲಿ ಒಟ್ಟು 5 ಸಾವಿರ ರೂ. ನೀಡಲಾಗುತ್ತದೆ.

ಹುಬ್ಬಳ್ಳಿ ಶಹರ ವ್ಯಾಪ್ತಿಯ 67 ವಾರ್ಡ್‌ಗಳಲ್ಲಿನ 432 ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಇಲ್ಲಿಯವರೆಗೆ ಸುಮಾರು 5.22 ಕೋಟಿ ರೂ. ಜಮಾ ಆಗಿದೆ. 2018-19ರಲ್ಲಿ 5862 ಫಲಾನುಭವಿಗಳು, 2019-20ರಲ್ಲಿ 5632 ಫಲಾನುಭವಿಗಳು ಹಾಗೂ 2020-21ನೇ ಸಾಲಿನ ಇಲ್ಲಿಯವರೆಗೆ 5013 ಫಲಾನುಭವಿಗಳ ಇದರ ಲಾಭ ಪಡೆದಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ವಿಭಾಗ: ಹುಬ್ಬಳ್ಳಿ ಗ್ರಾಮೀಣವಿಭಾಗದಲ್ಲಿ 2017ರಿಂದ ಇಲ್ಲಿಯವರೆಗೆ 26 ಹಳ್ಳಿಗಳ 146 ಅಂಗನವಾಡಿ ಕೇಂದ್ರಗಳಿಂದ 4268 ಫಲಾನುಭವಿಗಳು ಇದರ ಲಾಭ ಪಡೆದಿದ್ದು ಇಲ್ಲಿಯವರೆಗೆ ಸುಮಾರು 1,20,57,000 ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಈ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ವಿವಿಧ ಜಾಗೃತಿಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ.

Advertisement

ಕೋವಿಡ್‌ ಸಮಯದಲ್ಲಿ ತೊಂದರೆ: ಕೋವಿಡ್‌-19 ಸಮಯದಲ್ಲಿ ಅರ್ಜಿ ಸ್ವೀಕರಿಸಲು ತುಂಬಾ ತೊಂದರೆಯಾಗಿತ್ತು. ಪ್ರತಿ ತಿಂಗಳು ಒಂದು ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 25-30ರವರೆಗೆ ಬರುತ್ತಿದ್ದ ಅರ್ಜಿಗಳು ಕೇವಲ 2-3 ಸಲ್ಲಿಕೆಯಾಗಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗರ್ಭಿಣಿಯರು ಮನೆಯಿಂದ ಹೊರಬರಲಿಲ್ಲ.ಇನ್ನೂ ಅಂಗನವಾಡಿ ಕಾರ್ಯಕರ್ತೆಯರನ್ನು ಕೋವಿಡ್‌-19 ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಹೀಗಾಗಿ ಅರ್ಜಿ ಸಲ್ಲಿಕೆ ಪ್ರಮಾಣ ಕುಸಿತಕಂಡಿತ್ತು. ಲಾಕ್‌ಡೌನ್‌ ಸಡಿಲಿಕೆ ನಂತರ ಅರ್ಜಿಗಳು ಮೊದಲಿನಂತೆ ಸಲ್ಲಿಕೆಯಾಗುತ್ತಿವೆ.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಉತ್ತಮ ಯೋಜನೆಯಾಗಿದ್ದು ಶಹರ ವಿಭಾಗದಲ್ಲಿ ಹೆಚ್ಚಿನ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಈಗಾಗಲೇಇಲಾಖೆಯಿಂದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಈ ಯೋಜನೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಗರ್ಭಿಣಿಯರಿಗೆ ಯೋಜನೆ ಮಾಹಿತಿ ನೀಡಲಾಗುತ್ತಿದೆ.– ಡಾ|ಕಮಲಾ ಬೈಲೂರ, ಶಹರ ಶಿಶು ಅಭಿವೃದ್ಧಿ ಯೋಜನಾಧಿಕಾರಿ.

ಕೋವಿಡ್‌-19 ಸಮಯದಲ್ಲಿ ಬಿಟ್ಟರೆ ಮತ್ಯಾವತ್ತು ಗ್ರಾಮೀಣ ಭಾಗದಲ್ಲಿ ತೊಂದರೆಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರಿಗೆ ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇದಲ್ಲದೇ ಈ ಕುರಿತು ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಮಾಡಲಾಗುತ್ತದೆ.  -ಜ್ಯೋತಿ ಸಣ್ಣಕ್ಕಿ, ಮೇಲ್ವಿಚಾರಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next