Advertisement

ಪಿಎಂ ಕಿಸಾನ್‌ ಯೋಜನೆ: ಕರಾವಳಿ ರೈತರ ನಿರಾಸಕ್ತಿ!

02:05 AM Jul 04, 2019 | Sriram |

ಮಂಗಳೂರು: ರೈತರ ಆದಾಯ ವೃದ್ಧಿಸುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ-ಕಿಸಾನ್‌) ಯೋಜನೆಯ ನೋಂದಣಿಗೆ ಕರಾವಳಿಯ ರೈತರು ಅಷ್ಟೊಂದು ಆಸಕ್ತಿ ತೋರಿರುವುದು ಕಾಣಿಸುತ್ತಿಲ್ಲ. ಕೃಷಿ ಇಲಾಖೆ ಮಾಹಿತಿಯಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶೇ. 50ರಷ್ಟು ರೈತರು ಇನ್ನೂ ನೋಂದಾಯಿಸುವ ಗೋಜಿಗೆ ಹೋಗಿಲ್ಲ.

Advertisement

ಉಭಯ ಜಿಲ್ಲೆಗಳ ಅರ್ಹ ಸುಮಾರು 3,98,818 ರೈತರ ಪೈಕಿ 2,13,258 ರೈತರು ನೋಂದಣಿ ಮಾಡಿದ್ದು, 1,85,560 ರೈತರು ಇನ್ನೂ ನೋಂದಣಿ ಮಾಡಿಲ್ಲ.

ದ.ಕ. ಜಿಲ್ಲೆಯ 2,08,918 ಅರ್ಹ ರೈತರ ಪೈಕಿ 1,06,941 ರೈತರು ಮಾತ್ರ ನೋಂದಣಿ ಮಾಡಿದ್ದು, 1,01,977 ಮಂದಿ ಇನ್ನಷ್ಟೇ ನೋಂದಣಿ ಮಾಡಬೇಕಿದೆ. ಉಡುಪಿ ಜಿಲ್ಲೆಯ 1,89,900 ಅರ್ಹ ರೈತರ ಪೈಕಿ 1,06,317ರಷ್ಟು ರೈತರು ಮಾತ್ರ ನೋಂದಣಿ ಮಾಡಿದ್ದು, 83,583 ರೈತರಿಂದ ನೋಂದಣಿ ಬಾಕಿಯಿದೆ.

ಬಂಟ್ವಾಳ ತಾಲೂಕಿನಲ್ಲಿ 23,335, ಬೆಳ್ತಂಗಡಿಯಲ್ಲಿ 25,253, ಕಡಬದಲ್ಲಿ 13,353, ಮಂಗಳೂರು ತಾಲೂಕಿನಲ್ಲಿ 10,758, ಮೂಡುಬಿದಿರೆಯಲ್ಲಿ 6,790, ಪುತ್ತೂರಿನಲ್ಲಿ 13,726, ಸುಳ್ಯ ದಲ್ಲಿ 13,516 ರೈತರು ನೋಂದಣಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 9,948, ಬ್ರಹ್ಮಾವರ 17,327, ಕಾಪು 11,623, ಕುಂದಾಪುರ 30,271, ಬೈಂದೂರು 12,850, ಕಾರ್ಕಳ 18,251, ಹೆಬ್ರಿ ಯಲ್ಲಿ 6,047 ರೈತರು ಮಾತ್ರ ನೋಂದಣಿ ಮಾಡಿದ್ದಾರೆ.

ನೋಂದಣಿ ಮಾಡಿದ ಅರ್ಹ ರೈತರ ಖಾತೆಗೆ ಪ್ರತೀ ನಾಲ್ಕು ತಿಂಗಳಿಗೊಮ್ಮೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6,000 ರೂ. ಜಮೆ ಆಗಲಿದೆ. ಈಗಾಗಲೇ ಜಾರಿಯಾಗಿರುವ ಈ ಯೋಜನೆಯಡಿ ಎರಡು ಕಂತುಗಳ ಹಣವನ್ನು ನೋಂದಣಿ ಮಾಡಿದ ರೈತರ ಖಾತೆಗೆ ಈಗಾಗಲೇ ಜಮೆ ಮಾಡಲಾಗಿದೆ.

Advertisement

ವಿಳಂಬಕ್ಕೆ ಕಾರಣ ಹಲವು
ಈ ಯೋಜನೆಯಡಿ ಎಲ್ಲ ಸ್ಥರದ ರೈತರು ಒಳಗೊಳ್ಳುವ ಹಿನ್ನೆಲೆಯಲ್ಲಿ, ಕೆಲವು ರೈತರು ವಿವಿಧ ಕಾರಣಗಳಿಂದಾಗಿ ‘ಕೃಷಿಕ’ ಎಂದು ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೇವಲ 6,000 ರೂ. ಮಾತ್ರ ಸಿಗುವುದು ಎಂಬ ತಾತ್ಸಾರ ಮನೋಭಾವವೂ ಕೆಲವರಲ್ಲಿದೆ. ಜಿಲ್ಲಾಡಳಿತ, ಜಿ.ಪಂ., ಕೃಷಿ ಇಲಾಖೆ ಸಾಕಷ್ಟು ಪ್ರಚಾರ ಮಾಡಿದರೂ ಗ್ರಾಮೀಣ ಭಾಗಕ್ಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಎಂಬ ಅಂಶವೂ ವ್ಯಕ್ತವಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಎಷ್ಟು ಅರ್ಹ ರೈತರ ನೋಂದಣಿಗೆ ಅವಕಾಶ ಇದೆ ಎಂಬ ಬಗ್ಗೆ ಆಯಾ ಗ್ರಾಮ ವ್ಯಾಪ್ತಿಯ ಲೆಕ್ಕಾಚಾರ ಅವರಲ್ಲಿ ಇರುತ್ತಿದ್ದರೆ, ಸಂಬಂಧಪಟ್ಟ ಗ್ರಾ.ಪಂ. ರೈತರ ನೋಂದಣಿಗೆ ವಿಶೇಷ ಆದ್ಯತೆ ನೀಡಲು ಸಾಧ್ಯವಾಗುತ್ತದೆ. ಆದರೆ ಸದ್ಯ ಗ್ರಾ.ಪಂ.ನಲ್ಲಿ ಇಂತಹ ಮಾಹಿತಿ ಇಲ್ಲ. ಹಾಗೂ ಜಂಟಿ ಖಾತೆ ಇರುವ ಕೆಲವು ರೈತರ ಮನೆಯಲ್ಲಿ ಕಾನೂನಾತ್ಮಕ ಸಮಸ್ಯೆ ಇರುವ ಕಾರಣದಿಂದಲೂ ನೋಂದಣಿಯಲ್ಲಿ ತಡವಾಗಿದೆ ಎಂದು ಹೇಳಲಾಗುತ್ತಿದೆ.

ಷರತ್ತುಗಳಿವೆ
ನಿವೃತ್ತ/ ಹಾಲಿ ಸೇವೆಯಲ್ಲಿರುವ ಸರಕಾರಿ ಅಧಿಕಾರಿ ನೌಕರರು (ಗ್ರೂಪ್‌ ಡಿ ಹೊರತುಪಡಿಸಿ), 10,000 ರೂ.ಗಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು (ವೈದ್ಯರು, ಅಭಿಯಂತರು, ವಕೀಲರು ಮತ್ತು ಇತರ) ಮಾಜಿ ಹಾಗೂ ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಾಯಿಸಲು ಅವಕಾಶವಿಲ್ಲ. ಈ ಷರತ್ತಿನ ಕಾರಣದಿಂದಲೂ ಕೆಲವು ರೈತರು ನೋಂದಣಿಗೆ ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗುತ್ತಿದೆ.

ರೈತರು ನೋಂದಣಿ ಮಾಡಿ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಣಿಗೆ ಬಾಕಿ ಇರುವ ಕೃಷಿ ಜಮೀನು ಹೊಂದಿರುವವರು ತಮ್ಮ ಆಧಾರ್‌ ಸಂಖ್ಯೆ, ಆರ್‌ಟಿಸಿ ಹಾಗೂ ಬ್ಯಾಂಕ್‌ ಖಾತೆಯ ವಿವರಗಳೊಂದಿಗೆ ಸಂಬಂಧಪಟ್ಟ ಕೇಂದ್ರಗಳಲ್ಲಿ ನೋಂದಣಿಗೆ ಇನ್ನೂ ಅವಕಾಶವಿದೆ. ಎಲ್ಲ ರೈತರು ಇದರ ಪ್ರಯೋಜನ ಪಡೆಯಬೇಕು.
-ಸೀತಾ ಸಿ./ ಕೆಂಪೇಗೌಡ ದ.ಕ. / ಉಡುಪಿ ಜಂಟಿ ಕೃಷಿ ನಿರ್ದೇಶಕರು

ಇನ್ನೂ ಇದೆ ಅವಕಾಶ

ಪಿಎಂ ಕಿಸಾನ್‌ ಯೋಜನೆಗೆ ನೋಂದಾಯಿಸಲು ಬಾಕಿ ಇರುವ ಕೃಷಿ ಜಮೀನು ಹೊಂದಿರುವವರು ಕೂಡಲೇ ತಮ್ಮ ಆಧಾರ್‌ ಸಂಖ್ಯೆ, ಪಹಣಿ (ಆರ್‌ಟಿಸಿ)ವಿವರಗಳು ಹಾಗೂ ಬ್ಯಾಂಕ್‌ ಖಾತೆಯ ವಿವರಗಳೊಂದಿಗೆ ಹತ್ತಿರದ ಗ್ರಾ.ಪಂ.ನ ಗ್ರಾಮಕರಣಿಕರ ಕಚೇರಿ, ನಾಡ ಕಚೇರಿ, ತಾಲೂಕು ಕಚೇರಿ, ಬಾಪೂಜಿ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸ್ವಯಂ ಘೋಷಣಾ ಪತ್ರದೊಂದಿಗೆ ನೋಂದಾಯಿಸಲು ಅವಕಾಶವಿದೆ. ಆರ್‌ಟಿಸಿಯಲ್ಲಿ ಯಾರ ಹೆಸರಿದೆಯೋ ಅವರ ಹೆಸರಿನಲ್ಲಿ ನೋಂದಣಿ ಮಾಡಲಾಗುತ್ತದೆ. ಒಂದು ವೇಳೆ ಜಂಟಿ ಖಾತೆ ಇದ್ದರೆ ಅವರ ಎಲ್ಲರ ಹೆಸರಿನಲ್ಲಿಯೂ ನೋಂದಣಿ ಮಾಡಬಹುದು.
-ದಿನೇಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next