Advertisement

PM ಕಿಸಾನ್‌ ಇ ಕೆವೈಸಿ ಪ್ರಗತಿಗೆ ಕೃಷಿ ಸಖಿಯರ ನೆರವು

12:30 AM Jul 12, 2023 | Team Udayavani |

ಬೆಳ್ತಂಗಡಿ: ಪಿಎಂ ಕಿಸಾನ್‌ ಪ್ರೋತ್ಸಾಹಧನ ಪಡೆಯಲು ಇಕೆವೈಸಿ ಕಡ್ಡಾಯವಾಗಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 22,724 ಕೃಷಿಕರು ಸಂಪರ್ಕಕ್ಕೇ ಸಿಗದಿರುವುದು ಸಮೀಕ್ಷೆ ಯಿಂದ ಬೆಳಕಿಗೆ ಬಂದಿದೆ.

Advertisement

ದ.ಕ. ಜಿಲ್ಲೆಯಲ್ಲಿ ನೋಂದಾಯಿತ 1,53,483 ಫಲಾನುಭವಿಗಳ ಪೈಕಿ 28,442 ಮಂದಿ ಇ ಕೆವೈಸಿ ಮಾಡಿಸಿಲ್ಲ. ಈ ಮಧ್ಯೆ 15,779 ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ 1,53,580 ನೋಂದಾಯಿತ ಫ‌ಲಾನುಭವಿಗಳ ಪೈಕಿ 22,449 ಮಂದಿ ಇ ಕೆವೈಸಿ ಮಾಡಿಲ್ಲ. 6,945 ಕೃಷಿಕರು ಸಂಪರ್ಕಕಕ್ಕೇ ಸಿಕ್ಕಿಲ್ಲ.

ಇ ಕೆವೈಸಿ ಮಾಡದ ಫಲಾನುಭವಿಗಳು ವಾರ್ಷಿಕ ಸಹಾಯಧನದಿಂದ ವಂಚಿತ ರಾಗದಂತೆ ನೋಡಿಕೊಳ್ಳುವ ಸಲು ವಾಗಿ ಕೃಷಿ ಇಲಾಖೆಯು ಗ್ರಾ.ಪಂ. ಮುಖೇನ ಎನ್‌ಆರ್‌ಎಲ್‌ಎಂ ಸಂಸ್ಥೆ ನಿಯೋಜಿ ಸಿರುವ ಕೃಷಿ ಸಖೀಯರ ಮೂಲಕ ಸಮೀಕ್ಷೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಜೂ. 13ರಿಂದ ಜು. 7ರ ವರೆಗೆ ಸಮೀಕ್ಷೆ ನಡೆದಿತ್ತು. ಇಕೆವೈಸಿಗೆ ಜೂ. 30 ಕೊನೆಯ ದಿನವೆಂದು ಘೋಷಿಸಿದ್ದರೂ ಇನ್ನೂ ಕಾಲವಕಾಶವಿದೆ. ಸರಕಾರ ಶೀಘ್ರದಲ್ಲೇ ನೋಂದಣಿ ಆ್ಯಪ್‌ ಸ್ಥಗಿತಗೊಳಿಸುವ ಮುನ್ನ ನಮೂದಿಸಿದರಷ್ಟೆ ಯೋಜನೆಯ ನೇರ ಲಾಭ ಪಡೆಯಬಹುದಾಗಿದೆ. ನಿರ್ಲಕ್ಷ್ಯ ತೋರಿದವರು ವಾರ್ಷಿಕ 10 ಸಾವಿರ ರೂ. ಸಹಾಯಧನದಿಂದ ವಂಚಿತರಾಗಲಿದ್ದಾರೆ.

38,000 ರೂ. ಜಮೆ
2018ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಪಿಎಂ ಕಿಸಾನ್‌ ಯೋಜನೆಯಡಿ ರೈತರಿಗೆ ಬೆಂಬಲವಾಗಿ ಕೇಂದ್ರದಿಂದ 6 ಸಾವಿರ, ರಾಜ್ಯದಿಂದ 4 ಸಾವಿರ ರೂ. ಪ್ರೋತ್ಸಾಹಧನವನ್ನು ವಾರ್ಷಿಕ 5 ಕಂತು ಗಳಲ್ಲಿ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ದಿಂದ 13, ರಾಜ್ಯದಿಂದ 6 ಕಂತು ಗಳಲ್ಲಿ ಒಟ್ಟು 38,000 ರೂ. ರೈತರ ಖಾತೆಗೆ ಜಮೆಯಾಗಿದೆ. ಇದು ಮುಂದುವರಿ ಯಲು ಇ ಕೆವೈಸಿ ಕಡ್ಡಾಯ.

Advertisement

ಇ ಕೆವೈಸಿ ಮಾಡಿಸದೇ ಇರುವ ರೈತರ ಪಟ್ಟಿಯನ್ನು ಗ್ರಾ.ಪಂ.ಗಳ ನೋಟಿಸ್‌ ಬೋರ್ಡ್‌ನಲ್ಲಿ ಅಳವಡಿಸಲು ಇಲಾಖೆ ಮುಂದಾಗಿದ್ದು, ಸಂಬಂಧಪಟ್ಟವರು ತತ್‌ಕ್ಷಣ ಮಾಡಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಂಜಿತ್‌ ಟಿ.ಎಂ. ತಿಳಿಸಿದ್ದಾರೆ.

ಇ ಕೆವೈಸಿ ಎಂದರೇನು?
ಇ ಕೆವೈಸಿ ಅಂದರೆ Electronic know your customer. ರೈತರು ಹತ್ತಿರದ ಸೈಬರ್‌ ಸೆಂಟರ್‌ ಅಥವಾ ರೈತ ಸಂಪರ್ಕ ಕೇಂದ್ರ, ಗ್ರಾ.ಪಂ. ಅಥವಾ ಗ್ರಾಮ ಒನ್‌ಗಳಲ್ಲಿ ಸಂಪರ್ಕಿಸಿ ಆಧಾರ್‌ ಸಂಖ್ಯೆ ಹಾಗೂ ಆಧಾರ್‌ಗೆ ಜೋಡಣೆಯಾದ ಮೊಬೈಲ್‌ ಸಂಖ್ಯೆಯನ್ನು (pmkisanekyc) ವೆಬ್‌ ಸೈಟ್‌ನಲ್ಲಿ ದಾಖಲಿಸಬೇಕು. ಆಧಾರ್‌ಗೆ ಜೋಡಣೆಯಾದ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ಇಕೆವೈಸಿ ಆದಂತೆ.

ಸಂಪರ್ಕಕ್ಕೆ ಸಿಗದಿರಲು ಕಾರಣ
ರೈತರು ಯೋಜನೆಗೆ ನೋಂದಾಯಿಸು ವಾಗ ನೀಡಿರುವ ಮೊಬೈಲ್‌ ಸಂಖ್ಯೆ ತಪ್ಪಾಗಿ ಮುದ್ರಿತವಾಗಿರುವುದು ಅಥವಾ ತಾಂತ್ರಿಕ ದೋಷಗಳಿಂದ ಸಂಖ್ಯೆ ಅದಲಿ ಬದಲಿ ಆಗಿರುವುದು, ವಿಳಾಸ ತಪ್ಪಾಗಿ ರುವುದು ಮೊದಲಾದ ಕಾರಣಗಳಿಂದ ಹಲವರು ಸಂಪರ್ಕಕ್ಕೆ ಸಿಗದೆ ಇಲಾಖೆ ಅಂಥವರ ಪತ್ತೆಗೆ ಗ್ರಾ.ಪಂ.ನ ಮೊರೆ ಹೋಗುವಂತಾಗಿದೆ.

ಯಾರೆಲ್ಲ ಇಕೆವೈಸಿ ಮಾಡಿಸಿಲ್ಲವೋ ಅಂಥವರ ಪತ್ತೆಗೆ ಗ್ರಾಮ ಸಹಾಯಕ್‌, ಪೋಸ್ಟ್‌ ಮಾಸ್ಟರ್‌, ಆಶಾ ಕಾರ್ಯಕರ್ತೆಯರು, ಕೃಷಿ ಸಖೀಯರ ನೆರವಿನಿಂದ ಪ್ರಯತ್ನ ನಡೆಸಲಾಗಿದೆ. ಫಲಾನುಭವಿಗಳೇ ಮುಂದೆ ಬಂದು ಇಕೆವೈಸಿ ಮಾಡಿಸಬೇಕಿದೆ. ದುರ್ಬಲರು, ಮನೆಯಲ್ಲೇ ಇರುವವರ ಬಳಿಗೇ ತೆರಳಿ ಇಕೆವೈಸಿ ಮಾಡಿಸಲಾಗಿದೆ.
– ಸೀತಾ ಎಂ.ಸಿ. ಮತ್ತು ಕೆಂಪೇಗೌಡ ಎಂ., ಜಂಟಿ ಕೃಷಿ ನಿರ್ದೇಶಕರು ಉಡುಪಿ ಮತ್ತು ದ.ಕ.

Advertisement

Udayavani is now on Telegram. Click here to join our channel and stay updated with the latest news.

Next