ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಹೊಸ ಸಿಬಿಐ ನಿರ್ದೇಶಕರನ್ನು ನೇಮಿಸಲು ಇದೇ ಜನವರಿ 24ರಂದು ಸಭೆ ಸೇರಲಿದೆ ಎಂದು ಮೂಲಗಳು ಇಂದಿಲ್ಲಿ ತಿಳಿಸಿವೆ.
ಮೋದಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ (ಸಿಜೆಐ), ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸದಸ್ಯರು ಇದ್ದಾರೆ.
ಸರಕಾರವು ಈ ಮೊದಲು ಆಯ್ಕೆ ಸಮಿತಿಯ ಸಭೆಯನ್ನು ಜ.21ಕ್ಕೆ ನಿಗದಿಸಿತ್ತು. ಆದರೆ ಖರ್ಗೆ ಅವರು ಈ ಸಭೆ ಜು.24 ಅಥವಾ 25ರಂದು ನಡೆಯಬೇಕೆಂದು ಬಯಸಿದರು; ಪರಸ್ಪರ ಸಮಾಲೋಚನೆಯ ಬಳಿಕ ಜ.24ರಂದು ಸಭೆ ನಡೆಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.
ಸರಕಾರ ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಅವರನ್ನು ಹುದ್ದೆಯಿಂದ ಕಿತ್ತು ಹಾಕಿ ಅವರನ್ನು ಅಗ್ನಿ ಶಾಮಕ ಸೇವೆಗಳ ಮಹಾ ನಿರ್ದೇಶಕರನ್ನಾಗಿ ನೇಮಿಸಿದ್ದ ಕಾರಣ ಸಿಬಿಐ ನಿರ್ದೇಶಕರ ಹುದ್ದೆ ತೆರವಾಗಿತ್ತು.
ಐಪಿಎಸ್ ಅಧಿಕಾರಿ ಎಂ ನಾಗೇಶ್ವರ ರಾವ ಅವರ ಸಿಬಿಐ ನ ತಾತ್ಕಾಲಿಕ ನಿರ್ದೇಶಕರನ್ನಾಗಿ ಹೆಸರಿಸಲಾಗಿತ್ತು. ಸಿಬಿಐ ಗೆ ಕಾಯಂ ನಿರ್ದೇಶಕರನ್ನು ನೇಮಿಸದಿರುವ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪ್ರಧಾನಿ ವಿರುದ್ಧ ವಾಕ್ ದಾಳಿ ಮಾಡುತ್ತಲೇ ಇತ್ತು.
ಸಿಬಿಐ ಗೆ ಕಾಯಂ ನಿರ್ದೇಶಕರನ್ನು ನೇಮಿಸುವ ದಿಶೆಯಲ್ಲಿ ಉನ್ನತಾಧಿಕಾರದ ಸಮಿತಿಯ ಸಭೆಯನ್ನು ಬೇಗನೆ ನಡೆಸುವಂತೆ ಖರ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.