ಹೊಸದಿಲ್ಲಿ: ದೇಶಾದ್ಯಂತ ಬಿಸಿಳಿನ ಝಳ ಹೆಚ್ಚುತ್ತಿದ್ದು, ಮುಂಬರುವ ಕಡು ತಾಪವನ್ನು ಎದುರಿಸಲು ಸನ್ನದ್ಧರಾಗುವ ನಿಟ್ಟಿನಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ.
ಜನಸಾಮಾನ್ಯರು, ಮಕ್ಕಳು, ವೈದ್ಯಕೀಯ ವೃತ್ತಿಪರರು, ಸ್ಥಳೀಯಾಡಳಿತಗಳು ಮತ್ತು ವಿಪತ್ತು ನಿರ್ವಹಣ ತಂಡಗಳು ಹೀಗೆ ಎಲ್ಲ ವರ್ಗಗಳಿಗೂ ಪ್ರತ್ಯೇಕ ಜಾಗೃತಿ ಮಾರ್ಗಸೂಚಿ ಸಿದ್ಧಪಡಿಸುವಂತೆ ಪ್ರಧಾನಿ ಸಲಹೆ ನೀಡಿದರು.
ಇದಕ್ಕೂ ಮುನ್ನ ಮುಂಗಾರು ಮುನ್ಸೂಚನೆ, ಹಿಂಗಾರು ಬೆಳೆಗಳ ಮೇಲೆ ಪರಿಣಾಮ, ವೈದ್ಯಕೀಯ ಮೂಲಸೌಕರ್ಯಗಳ ಸನ್ನದ್ಧತೆ, ತಾಪ ಸಂಬಂಧಿ ಅವಘಡ ಎದುರಿಸಲು ಕೈಗೊಳ್ಳಲಾದ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಧಾನಿ ಸಲಹೆಗಳು
– ಭಾರತೀಯ ಆಹಾರ ನಿಗಮವು ಆಹಾರಧಾನ್ಯಗಳನ್ನು ಗರಿಷ್ಠ ಮಟ್ಟದಲ್ಲಿ ದಾಸ್ತಾನಿಡಬೇಕು.
– ಸುದ್ದಿವಾಹಿನಿಗಳು, ಎಫ್ಎಂ ರೇಡಿಯೋಗಳು ಪ್ರತೀ ದಿನ ಹವಾಮಾನ ಮುನ್ಸೂಚನೆ ವರದಿ ನೀಡಬೇಕು
– ಎಲ್ಲ ಆಸ್ಪತ್ರೆಗಳಲ್ಲೂ ವಿಸ್ತೃತ ಫೈರ್ ಆಡಿಟ್ ನಡೆಸಬೇಕು.
– ಅತಿಯಾದ ಬಿಸಿಲಿದ್ದಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ನೀಡಿ
– ಕಿರುಚಿತ್ರಗಳು, ಜಿಂಗಲ್‌ಗಳು, ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿ.