ಮುಂಬೈ: ಮುಂಬೈ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿ ನಡೆದು ಶನಿವಾರಕ್ಕೆ 14 ವರ್ಷಗಳು ಪೂರ್ಣಗೊಂಡಿದೆ. ಆ ಪ್ರಯುಕ್ತ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಮುಖ್ಯಮಂತ್ರಿ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಪ್ರಮುಖರು ಮುಂಬೈ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಇರುವ 26/11 ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.
2008ರ ದಾಳಿಯಲ್ಲಿ ಅಸುನೀಗಿದ ಪೊಲೀಸರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಬಗ್ಗೆ ಸಂದೇಶ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು “ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲರನ್ನೂ ಸ್ಮರಿಸುತ್ತೇವೆ.
ಉಗ್ರಗಾಮಿಗಳ ಅಟ್ಟಹಾಸಕ್ಕೆ ಬಲಿಯಾದವರ ಕುಟುಂಬ ಸದಸ್ಯರ ನೋವನ್ನು ಅರ್ಥ ಮಾಡಿಕೊಂಡಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
Related Articles
ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿ “ಭಯೋತ್ಪಾದನೆ ಎನ್ನುವುದು ಮಾನವತೆಗೆ ಬೆದರಿಕೆಯಾಗಿದೆ. ಇಂಥ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ಈ ದುರಂತದಲ್ಲಿ ಅಸುನೀಗಿದವರಿಗೆ ಗೌರವ ನಮನಗಳು’ ಎಂದು ಬರೆದುಕೊಂಡಿದ್ದಾರೆ. ಇಸ್ರೇಲ್‌ನ ಜೆರುಸಲೇಂನಲ್ಲಿ ಕೂಡ 26/11ರ ಕಾರ್ಯಾಚರಣೆಯಲ್ಲಿ ಮಡಿದವರಿಗಾಗಿ ಅಂತಿಮ ನಮನ ಸಲ್ಲಿಸಲಾಯಿತು.