Advertisement

ನೀನಿಲ್ಲದೆ ಕಂಗಾಲಾಗಿದ್ದೇನೆ ಒಮ್ಮೆ ಬಂದು ಮಾತನಾಡಿಸು ಪ್ಲೀಸ್‌…

02:43 PM Jan 23, 2018 | |

ನೀನು ಕಾಣದಾದ ಮೇಲೆ ನನಗೆ ಕೆಲಸಗಳಲ್ಲಿ ಯಾವುದೇ ಆಸಕ್ತಿ ಕಾಣಿಸುತ್ತಿಲ್ಲ. ನೀನೊಬ್ಬಳು ನನ್ನ ಜೊತೆ ಇರಬೇಕಿತ್ತು ಎಂದು ಬಲವಾಗಿ ಅನ್ನಿಸತೊಡಗಿದೆ. ಪ್ರೀತಿಯನ್ನು ಹೇಳಿಕೊಳ್ಳದಿದ್ದ ಮಾತ್ರಕ್ಕೆ ಅದು ಸುಳ್ಳಾಗಲಾರದು. ಕೋಟಿ ಕೋಟಿ ಬಾರಿ ಹೇಳುತ್ತಿದ್ದೇನೆ ಎಸ್‌… ನಿನ್ನನ್ನು ನಾನು ತುಂಬಾ ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ. 

Advertisement

ಪ್ರೀತಿಯ ಎಸ್‌, ಹೇಗಿದ್ದೀ? ನೀನು ಈ ಪತ್ರವನ್ನು ಖಂಡಿತಾ ನಿರೀಕ್ಷಿಸಿರುವುದಿಲ್ಲ ಎಂದು ನನಗೆ ಗೊತ್ತು. ಅಷ್ಟೇ ಅಲ್ಲ, ನೀನು ನನ್ನನ್ನು ಖಂಡಿತಾ ಮರೆತಿಲ್ಲ ಅನ್ನೋದು ಕೂಡ ನನಗೆ ಗೊತ್ತು. ನಿಜ ಎಸ್‌, ನನ್ನ ನಿನ್ನ ನಡುವೆ ಮೌನ ನೆಲೆಸಿ ವರುಷಗಳೇ ಕಳೆದಿವೆ. ಆದರೆ, ಪ್ರೀತಿ ಮಾತ್ರ ಚೂರೂ ಕಡಿಮೆಯಾಗಿಲ್ಲ ಎನ್ನುವುದಂತೂ ಸತ್ಯ.

ಸತ್ಯ ಹೇಳುತ್ತೇನೆ ಎಸ್‌, ನಿನ್ನನ್ನು ನೋಡಿದ ಮೊದಲ ದಿನ, ನಿನ್ನ ಬಗ್ಗೆ ನನಗೇನೂ ಅನ್ನಿಸಿಯೇ ಇರಲಿಲ್ಲ. ನೀನೊಂದು ಸಾಮಾನ್ಯ ಹುಡುಗಿಯಂತೆಯೇ ಕಾಣಿಸಿದ್ದೆ.  ಆದರೆ, ಬರುಬರುತ್ತಾ ನಿತ್ಯವೂ ನನ್ನೆದುರಿಗೆ ಓಡಾಡುತ್ತಾ, ನನ್ನ ಕಂಡಾಗೆಲ್ಲಾ ತುಟಿಯ ಮೇಲೊಂದು ಸಣ್ಣಗಿನ ನಗು ಬೀರಿ, “ನಮಸ್ತೆ’ ಎನ್ನುತ್ತಾ ತೀರಾ ಆತ್ಮೀಯಳಂತೆ ಹುಬ್ಬನ್ನು ಹಾರಿಸುತ್ತಾ ಹೋಗುತ್ತಿದ್ದೆಯಲ್ಲಾ… ಆಗಲೇ ನನ್ನ ಮನಸ್ಸು ನಿನ್ನೆಡೆಗೆ ನನಗರಿವಿಲ್ಲದೆ ವಾಲತೊಡಗಿತ್ತು.  ನಿತ್ಯವೂ ನಿನ್ನ ಆ ಕುಡಿನೋಟ, ಹುಬ್ಬು ಹಾರಿಸುತ್ತಾ ಮಾತನಾಡುವ ನಿನ್ನ ದುಂಡನೆಯ ಮುಖ ನೋಡದಿದ್ದರೆ ಅದೇನೋ ಕಳೆದುಕೊಳ್ಳುತ್ತಿದ್ದೇನೆ ಅಂತನ್ನಿಸುತಿತ್ತು.   ಮೊದಲೆಲ್ಲಾ ಭಾನುವಾರ ಬಂದರೆ ಬಹಳ ಖುಷಿಯಾಗುತಿತ್ತು. ಆದರೆ ನಿನ್ನ ಪರಿಚಯವಾದ ಮೇಲೆ “ಈ ಸಂಡೆ ಯಾಕಾಗಿದೆ’ ಎಂದು ಹಾಡುವಂತಾಗಿದೆ. 

 ನಿನಗೆ ಗೊತ್ತಾ? ಅಪರೂಪಕ್ಕೊಮ್ಮೊಮ್ಮೆ ನೀನು ರಜೆ ಮಾಡಿದಾಗೆಲ್ಲಾ ನನ್ನ ಮನಸ್ಸು ಇನ್ನಿಲ್ಲದಂತೆ ಕಸಿವಿಸಿಗೊಳ್ಳುತಿತ್ತು. ನಿನಗೇನಾಗಿರಬಹುದು? ಹುಷಾರಿಲ್ಲವಾ? ಡಾಕ್ಟರ್‌ ಹತ್ತಿರ ಹೋಗಿರಬಹುದಾ? ಸಂಬಂಧಿಕರ ಮದುವೆಗಳೇನಾದರೂ ಇದ್ದಿರಬಹುದಾ?… ಎಂದೆಲ್ಲಾ ಯೋಚಿಸುತ್ತಿದ್ದೆ. ಹುಚ್ಚು ಹಿಡಿದಂತಾಗುತಿತ್ತು. ಮತ್ತೆ ಮರುದಿನ ಬಂದು ನೀನು ಕಾರಣ ಹೇಳಿದಾಗಷ್ಟೇ  ನನಗೆ ಸಮಾಧಾನ. ಇಷ್ಟೆಲ್ಲಾ ಆಗಿಯೂ ನಾನೇಕೆ ನಿನ್ನ ಫೋನ್‌ ನಂಬರ್‌ ತಗೊಳ್ಳಲಿಲ್ಲ ಎನ್ನುವುದು ಈ ಹೊತ್ತಿಗೂ ಅಚ್ಚರಿ. ನೀನು ಕೂಡ ಕೇಳಲಿಲ್ಲ ಎನ್ನುವುದೂ ಸತ್ಯ. ಅದು ಇದ್ದಿದ್ದರೆ ಈ ಪತ್ರ ಬರೆಯುತ್ತಿದ್ದೆನಾ? ಗೊತ್ತಿಲ್ಲ. ಕಳೆದ ಐದು ವರುಷಗಳಲ್ಲೂ ನಿನ್ನ ನಗು, ನಿನ್ನ ನೋಟ, ಎಲ್ಲವೂ ಕೂಡ ನನ್ನ ದಿನಚರಿಯ ಒಂದು ಭಾಗವಾಗಿ ಹೋಗಿತ್ತು.

 ನಿನಗಾಗಿ ನಾನು ಅದೆಷ್ಟು ಬದಲಾಗಿದ್ದೆ ಗೊತ್ತಾ? ನಿನ್ನೆದುರು ಹೀರೋ ಆಗಬೇಕೆಂದು ಬಯಸಿ, ನಿನಗೆ ಇಷ್ಟವಾಗುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೆ. ಕ್ರಮೇಣ ಅದು ನನಗೆ ರೂಢಿಯಾಯ್ತು. ಸಮಾಜದಲ್ಲೂ ಒಂದಷ್ಟು ಹೆಸರು ಬಂದಿತ್ತು. ಅದೆಲ್ಲದರ ಯಶ ನಿನಗೂ ಸಲ್ಲುತ್ತದೆ ಎಸ್‌.

Advertisement

 ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನಾನು ಹೇಳಿದ ಬುದ್ಧಿ ಮಾತನ್ನೇ ತಪ್ಪಾಗಿ ಅರ್ಥೈಸಿಕೊಂಡ ನೀನು, ನೀವು ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದಿರಿ ಎನ್ನುವ ಒಂದೇ ಕಾರಣವೊಡ್ಡಿ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಅವತ್ತು ಅದೆಷ್ಟು ಬೇಸರವಾಗಿತ್ತು ಗೊತ್ತಾ? ಮತ್ತೆ ಮರುದಿನ ಸಿಕ್ಕಾಗ ನನ್ನ ನಗುವಿಗೆ ಪ್ರತಿಯಾಗಿ ನೀನು ಮುಖ ತಿರುವಿ ನಡೆದುಬಿಟ್ಟಾಗ ನಾನು ಕುಸಿದು ಹೋಗಿದ್ದೆ .ಅದ್ಯಾರೋ ಪದೇಪದೆ ಮುಖಕ್ಕೆ ಬಾರಿಸಿದಂತೆನಿಸಿತ್ತು. ನಾನು ಮಾತನಾಡಲು ಪದೇಪದೆ ಪ್ರಯತ್ನಿಸಿದಾಗಲೂ ನನಗಲ್ಲವೇನೋ ಎನ್ನುವಂತೆ ನೀನು ಪ್ರತಿಕ್ರಿಯಿಸುತ್ತಿದ್ದ ರೀತಿ ನೋಡಿ, ನನ್ನ ಅಹಂ ಕೂಡ ಅಡ್ಡ ಬಂದು ನಾನು ಕೂಡ ಮಾತಾಡುವುದನ್ನು ಬಿಟ್ಟಿದ್ದೆ. ನಂತರದ ದಿನಗಳಲ್ಲಿ ನೀನು ನಾಪತ್ತೆಯಾದಾಗ ಹೃದಯ ಬೆಂದುಹೋಗಿತ್ತು. ಆಮೇಲೆ ನಿನ್ನ ಸ್ನೇಹಿತರ ಮೂಲಕ, ನೀನು ಬೆಂಗಳೂರಿಗೆ ಹೋದೆ ಎನ್ನುವುದು ತಿಳಿಯಿತು.

  ಅಂದಿನಿಂದ ಒಳಗೊಳಗೇ ಕುಸಿಯತೊಡಗಿದ್ದೇನೆ. ನೀನು ಕಾಣದಾದ ಮೇಲೆ ನನಗೆ ಕೆಲಸಗಳಲ್ಲಿ ಯಾವುದೇ ಆಸಕ್ತಿ ಕಾಣಿಸುತ್ತಿಲ್ಲ. ನೀನೊಬ್ಬಳು ನನ್ನ ಜೊತೆ ಇರಬೇಕಿತ್ತು ಎಂದು ಬಲವಾಗಿ ಅನ್ನಿಸತೊಡಗಿದೆ. ಪ್ರೀತಿಯನ್ನು ಹೇಳಿಕೊಳ್ಳದಿದ್ದ ಮಾತ್ರಕ್ಕೆ ಅದು ಸುಳ್ಳಾಗಲಾರದು. ಕೋಟಿ ಕೋಟಿ ಬಾರಿ ಹೇಳುತ್ತಿದ್ದೇನೆ ಎಸ್‌.. ನಿನ್ನನ್ನು ನಾನು ತುಂಬಾ ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ. ನೀನಿಲ್ಲದೆ ಈ ಬದುಕು ಸುಂದರವಾಗಲಾರದು ಅಂತನ್ನಿಸತೊಡಗಿದೆ. ಒಮ್ಮೆ ಬಂದು ಮಾತನಾಡಿಸು ಪ್ಲೀಸ್‌.          

ಇತಿ ನಿನಗಾಗಿ ಕಾಯುತಿರುವ,
ನಿನ್ನ ಹುಡುಗ

ನರೇಂದ್ರ ಎಸ್‌. ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next