Advertisement
ರುಕ್ಮಿಣಮ್ಮ ತಮ್ಮ ಒಬ್ಬನೇ ಮಗನಿಗೆ ಇತ್ತೀಚೆಗೆ ಮದುವೆ ಮಾಡಿದ್ದರು. ಅವರ ಮಗನಿಗೆ ಒಳ್ಳೆಯ ಕೆಲಸವಿತ್ತು. ಸೊಸೆಯೂ ಒಳ್ಳೆಯ ಮನೆತನದದಿಂದ ಬಂದವಳು. ಅವಳೂ ಕೈ ತುಂಬಾ ಸಂಪಾದಿಸುವ ಒಳ್ಳೆಯ ಕೆಲಸದಲ್ಲಿದ್ದಳು. ಗುಣದಲ್ಲಿ, ಕೆಲಸ ಕಾರ್ಯಗಳಲ್ಲಿ, ಯಾವುದೇ ರೀತಿಯಲ್ಲೂ ದೂರುವಂಥ ಹೆಣ್ಣಾಗಿರಲಿಲ್ಲ. ಎಲ್ಲ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು.
ಮನದೊಳಗಿನ ತಳಮಳವನ್ನು ಮಗನಲ್ಲಿ ಹೇಳ್ಳೋಣವೆಂದರೆ, ಎಲ್ಲಿ ಮಗ ತನ್ನನ್ನು ತಪ್ಪಾಗಿ ಭಾವಿಸುತ್ತಾನೋ ಎಂಬ ಆತಂಕ. ಮಗ-ಸೊಸೆಯ ಮಧ್ಯೆ ವಿರಸ ಮೂಡಿಸುವುದು ಅವರಿಗೂ ಇಷ್ಟವಿಲ್ಲ. ತಾನು ಸೊಸೆಯಲ್ಲಿ ಮಗಳನ್ನು ಕಾಣುವಂತೆ, ಅವಳ್ಯಾಕೆ ಅತ್ತೆಯಲ್ಲಿ ಅಮ್ಮನನ್ನು ಕಾಣುತ್ತಿಲ್ಲ? ನಾನೇನಾದರೂ ಅವಳೊಂದಿಗೆ ತಪ್ಪಾಗಿ ನಡೆದುಕೊಂಡಿದ್ದೀನಾ ಅಂತ ಸಂದೇಹ, ಕೊರಗು ಶುರುವಾಗಿತ್ತು ರುಕ್ಮಿಣಮ್ಮನಿಗೆ. ಕೊನೆಗೊಮ್ಮೆ, ಮಗನೇ ಆಕೆಯನ್ನು ಕೇಳಿದ್ದ. “ಯಾಕಮ್ಮಾ, ಒಂಥರಾ ಮಂಕಾಗಿರುತ್ತೀಯಲ್ಲ? ನನ್ನಿಂದ ಅಥವಾ ಅವಳಿಂದ ಏನಾದ್ರೂ ತಪ್ಪಾಗಿದೆಯಾ?’ ಅಂತ.
Related Articles
Advertisement
ಸೊಸೆ ಏನಂತಾಳೆ?ತಾಯಿಯ ಮಾತನ್ನು ಅರ್ಥ ಮಾಡಿಕೊಂಡ ಮಗ, ಹೆಂಡತಿಯ ಬಳಿ ನಿಧಾನವಾಗಿ ವಿಷಯ ಬಿಚ್ಚಿಟ್ಟ. ಅಮ್ಮನಿಂದ ಏನಾದ್ರೂ ಬೇಸರವಾಗಿದ್ದರೆ ಕ್ಷಮಿಸಿ, ಅವರನ್ನು ಮಾತನಾಡಿಸು ಅಂತ ನಯವಾಗಿ ಕೇಳಿಕೊಂಡ. ಆಗ ಅವಳು, “ಅಯ್ಯೋ ರೀ, ಅತ್ತೆಯ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ. ಆದರೆ, ಅವರಿಗೆ ವಯಸ್ಸಾಗಿದೆಯಲ್ಲ, ಎಲ್ಲಾ ಕೆಲಸದಲ್ಲೂ ತುಂಬಾ ನಿಧಾನ. ಬೆಳಗ್ಗೆ ಅವರಲ್ಲಿ ಮಾತಾಡುತ್ತಾ ಕೂರಲು ಸಾಧ್ಯವಿಲ್ಲ. ಎಂಟು ಗಂಟೆಗೆ ಆಫೀಸ್ ಕ್ಯಾಬ್ ಬರುವುದರೊಳಗೆ, ತಿಂಡಿ- ಊಟ ಎಲ್ಲವನ್ನೂ ರೆಡಿ ಮಾಡಬೇಕು. ಅವರಿಂದ ಕೆಲಸ ಮಾಡಿಸಲೂ ನನಗಿಷ್ಟವಿಲ್ಲ. ಹಾಗಾಗಿ, ಎಲ್ಲ ಕೆಲಸವನ್ನೂ ನಾನೊಬ್ಬಳೇ ಮಾಡುತ್ತೇನೆ. ಈ ಮಧ್ಯೆ ಅವರ ಜೊತೆ ಮಾತಾಡಲು ಸಾಧ್ಯವಿಲ್ಲ. ಇನ್ನು ನಾನು ಬರೋದು ಸಂಜೆ ಏಳರ ನಂತರವೇ. ಅದು ಅವರ ಧಾರಾವಾಹಿ ನೋಡುವ ಸಮಯ. ಅವರು ಟಿ.ವಿ. ನೋಡುವಾಗ ನಾನು ಮಾತನಾಡಿಸುವುದು ಸರಿಯಲ್ಲ ಅಂತ ಸುಮ್ಮನಿರುತ್ತೇನೆ. ಬೆಳಗ್ಗಿನಿಂದ ಕೆಲಸ ಮಾಡಿ, ಮಾಡಿ ಸುಸ್ತಾಗಿರುವಾಗ ನನಗೂ ಮಾತು ಬೇಡವಾಗಿರುತ್ತದೆ. ಅಡುಗೆ ಕೆಲಸ ಮುಗಿಸಿ, ಊಟ ಮಾಡುವಷ್ಟರಲ್ಲಿ ದಿನವೇ ಕಳೆದು ಹೋಗಿರುತ್ತದೆ. ಮತ್ತೆ ಮರುದಿನದಿಂದ ಅದೇ ಪುನರಾವರ್ತನೆ. ಈಗ ಹೇಳಿ, ಮಾತನಾಡಲು ನನಗಾದರೂ ಎಲ್ಲಿ ಪುರುಸೊತ್ತಿರುತ್ತದೆ?’ ಇಲ್ಲಿ ಬರುವ ಅತ್ತೆ-ಸೊಸೆಯರಲ್ಲಿ ಯಾವುದೇ ದ್ವೇಷ ಭಾವನೆಗಳಿಲ್ಲ. ಅವರಿಬ್ಬರಿಗೂ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ ಸಮಯದ ಅಭಾವ. ದಿನವಿಡೀ ಮನೆಯಲ್ಲಿ ಇರುವ ಅತ್ತೆಗೆ, ಸೊಸೆಯೊಡನೆ ಕುಳಿತು ಹರಟುವ ಆಸೆ. ಆದರೆ, ಸೊಸೆಗೆ ಯಾವಾಗಲೂ ಕೆಲಸದ್ದೇ ಚಿಂತೆ. ಹೀಗಾಗಿ ಒಂದೇ ಮನೆಯಲ್ಲಿದ್ದರೂ ಮಾತಿನ ಅಭಾವದಿಂದ ಅತ್ತೆ ಸೊಸೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಕಷ್ಟಪಡುವಂತಾಗಿದೆ. ಅತ್ತೆ-ಸೊಸೆ ಇಬ್ಬರೂ ಸ್ವಲ್ಪ ಸಮಯ ಹೊಂದಿಸಿಕೊಂಡರೆ, ಸಮಸ್ಯೆಯೇ ಇರುವುದಿಲ್ಲ. ಅತ್ತೆಯಾದವಳು ಸೊಸೆಯ ಅಡುಗೆ ಕೆಲಸಕ್ಕೆ ಕೈ ಜೋಡಿಸಿದರೆ, ಆಕೆಗೂ ಎಲ್ಲ ಕೆಲಸವನ್ನು ಮುಗಿಸಿ ಆಫೀಸಿಗೆ ಹೋಗಬೇಕೆಂಬ ಒತ್ತಡವಿರುವುದಿಲ್ಲ. ಅಷ್ಟೇ ಅಲ್ಲದೆ, ಇಬ್ಬರೂ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಲೇ ಸ್ವಲ್ಪ ಹೊತ್ತು ಮಾತಾಡಬಹುದು. ಆಗ ಸೊಸೆಗೂ ಅತ್ತೆಯೊಂದಿಗೆ ಸಮಯ ಕಳೆಯಲು ಕಾಲಾವಕಾಶ ಸಿಗುತ್ತದೆ. ಸಂಜೆ ಆಫೀಸ್‌ನಿಂದ ಬಂದಮೇಲೆ, ಅತ್ತೆ-ಸೊಸೆಯರಿಬ್ಬರೂ ಒಟ್ಟಿಗೇ ಕುಳಿತು ಕಾಫಿ ಕುಡಿದು, ನಂತರ ಮುಂದಿನ ಕೆಲಸಗಳನ್ನು ಮಾಡಬಹುದು. ಸೊಸೆ ಬರುವ ಸಮಯದಲ್ಲಿ, ಅತ್ತೆ ಟಿವಿ ಮುಂದೆ ಕುಳಿತಿದ್ದರೆ, ಸಂವಹನ ಸಾಧ್ಯವಿಲ್ಲ. ನಿತ್ಯದ ಆಗುಹೋಗುಗಳನ್ನು, ಕೌಟುಂಬಿಕ ವಿಚಾರಗಳನ್ನು ಪರಸ್ಪರ ಹಂಚಿಕೊಂಡರೆ ಅಂತರ ಕಡಿಮೆಯಾಗುತ್ತದೆ. ಮನಸ್ಸಿನ ಭಾವನೆಗಳನ್ನು ಮಾತಿನಲ್ಲಿ ತೋರ್ಪಡಿಸಿದರೆ, ಒಡೆದು ಹೋಗುವ ಮನಸ್ಸುಗಳು ಹತ್ತಿರವಾಗುತ್ತದೆ. -ವೇದಾವತಿ ಎಚ್. ಎಸ್.