ನವದೆಹಲಿ: ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯವಾದಿ ಅಶೋಕ್ ಪಾಂಡೆ ಈ ಪಿಐಎಲ್ ಸಲ್ಲಿಸಿದ್ದು, ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸ್ಥಳದಲ್ಲಿ ಗೋಡೆ ನಿರ್ಮಿಸುವಂತೆ ಕೋರಿದ್ದಾರೆ.
ಈ ಹಿಂದೆಯೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿದೆ.
ತಮಿಳುನಾಡಿನ ಆಗ್ನೇಯ ಕರಾವಳಿಯ ಪಂಬನ್ ದ್ವೀಪದಿಂದ ಶ್ರೀಲಂಕಾದ ಆಗ್ನೇಯ ಕರಾವಳಿಯ ಮನ್ನಾರ್ ದ್ವೀಪದವರೆಗೆ ಸುಣ್ಣದ ಕಲ್ಲುಗಳ ಬಂಡೆಯಿಂದ ಶ್ರೀರಾಮ ಮತ್ತು ಕಪಿ ಸೇನೆಯು ಸೇತುವೆ ನಿರ್ಮಿಸಿರುವ ಬಗ್ಗೆ ವಾಲ್ಮೀಕಿ ರಚಿತ ಶ್ರೀರಾಮಾಯಣದಲ್ಲಿ ಉಲ್ಲೇಖವಿದೆ.
ವಿವಾದಿತ ಸೇತುಸಮದ್ರಂ ಹಡುಗು ಮಾರ್ಗ ಯೋಜನೆಗೆ ಯುಪಿಎ-1 ಸರ್ಕಾರ ಮುಂದಾಗಿತ್ತು. ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, 2007ರಲ್ಲಿ ಇದಕ್ಕೆ ತಡೆಯಾಜ್ಞೆ ನೀಡಲಾಯಿತು.