ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ 1884ರಲ್ಲಿ ಕಟ್ಟಿದ ಪ್ಲಾಜ ದೆ ಮಾಯೋ (Plaza de Mayo) ಪ್ರಖ್ಯಾತ ಸ್ಥಳಗಳಲ್ಲಿ ಒಂದು. ನಗರದ ಕೇಂದ್ರದಲ್ಲಿರುವ ಈ ಎಡೆಯಿಂದ ಬ್ಯೂನಸ್ ಐರೀಸ್ ಎಲ್ಲ ದಿಕ್ಕಿಗೂ ಹಬ್ಬಿಕೊಂಡಿದೆ. ಆರ್ಥಿಕ ಹಾಗೂ ವ್ಯವಹಾರಿಕ ಕೇಂದ್ರದಲ್ಲಿರುವ ಈ ಪ್ಲಾಜವು ಕುತೂಹಲಕಾರಿ ಚಟುವಟಿಕೆಗಳ ಕೇಂದ್ರವೂ ಹೌದು.
1976- 1983ರ ನಡುವೆ ನಡೆದ ಹೇಯ ಸಮರದಲ್ಲಿ (ಗೇರಾ ಸೂಸಿಯ/Dirty War) ನಡೆದ ಮಾನವ ಹಕ್ಕು ಉಲ್ಲಂಘನೆಗೆ ಕಾರಣವಾದ ಸರಕಾರದ ವಿರುದ್ಧ ಪ್ರತಿ ಗುರುವಾರ ಅಜ್ಜಿ ಹಾಗೂ ಅಮ್ಮಂದಿರ ಚಳವಳಿಯೊಂದು ಇಲ್ಲಿ ನಡೆದುಕೊಂಡು ಬಂದಿದೆ.
ಪ್ಲಾಜ ದೆ ಮಾಯೋದ ತಾಯಂದಿರು (ಮಾದ್ರೇಸ್ ದೆ ಪ್ಲಾಜ ದೆ ಮಾಶೊ/ Mothers of the Plaza de Mayo) ಈ ಚಳವಳಿಯ ಮುಂದಾಳುಗಳು. ಸಾಧಾರಣವಾಗಿ ಪ್ರವಾಸಿಗರಿಂದ ತುಂಬಿರುವ ಈ ಜಾಗ ಸಾಮಾಜಿಕ ನ್ಯಾಯ ಹಾಗೂ ಬದಲಾವಣೆಯ ದ್ಯೋತಕವಾಗಿದ್ದು, ಕರೋನಾ ವೈರಸ್‌ನಿಂದಾಗಿ ಲಾಕ್ ಡೌನ್ ಆರಂಭವಾದ ಮೂರು ತಿಂಗಳಿಂದ ನಿರ್ಜನವಾಗಿ ಬಿಕೋ ಎನ್ನುತ್ತಿದೆ.
ಪ್ಲಾಜಾ ದೆ ಮಾಯೋ ಸ್ಮಾರಕದ ಸುತ್ತ ನೆಲದ ಮೇಲೆ ಬಿಡಿಸಲಾಗಿರುವ ಚಿತ್ರಗಳು ಅರ್ಜೆಂಟೀನಾದ ಹಲವರಿಗೆ ತಾಯಂದಿರ ಹೋರಾಟದ ಪ್ರತೀಕವಾಗಿದೆ. ನಾನು ಮೊದಲ ಬಾರಿ ಈ ಸ್ಮಾರಕವನ್ನು ನೋಡಿದ್ದು, ಅರ್ಜೆಂಟೀನಾ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ನನ್ನ ಮೊದಲ ಪರಿಚಯದ ದಿನಕ್ಕೆ ಹೋಗುತ್ತಿದ್ದಾಗ. ಕೊರೊನಾ ವೈರಸ್‌ನ ಮೊದಲ ಕೇಸು ಅರ್ಜೆಂಟೀನಾದಲ್ಲಿ ಆಗಷ್ಟೇ ಗುರುತಿಸಲ್ಪಟ್ಟಿದ್ದು, ಯಾರಿಗೂ ಅದರ ಮುನ್ನೋಟದ ಕುರುಹು ಇರಲಿಲ್ಲ. ಮೊದಲ ನೋಟಕ್ಕೆ, ಸ್ಮಾರಕದ ಸುತ್ತದ ಚಿತ್ರಗಳ ರೂಪಕವು ನನಗೆ ತಿಳಿಯಲಿಲ್ಲ. ನನ್ನ ಜತೆಗಿದ್ದ ಸ್ಥಳೀಯ ಗೆಳತಿಯನ್ನು ಕೇಳಿದೆ. ಅವಳು ವಿವರಿಸಿದಾಗ ಅದರ ಮಹತ್ವದ ಅರಿವಾಯಿತು.
ಆ ಬಿಳಿಯ ಚಿತ್ರಗಳು ಪ್ರತಿವಾರ ಪ್ರತಿಭಟನೆಯಲ್ಲಿ ತೊಡಗಿದ್ದ ತಾಯಂದಿರು ತಲೆಗೆ ತೊಡುತ್ತಿದ್ದ ಸ್ಕಾಫ್ìಗಳು. ಅಂದಿನ ಮಿಲಿಟರಿ ಸರ್ವಾಧಿಕಾರವು ಎಡಪಂಥೀಯರು, ವಿದ್ಯಾರ್ಥಿಗಳು, ಪ್ರಾಜ್ಞರು, ಕಲಾವಿದರು ಹಾಗೂ ಸರಕಾರವನ್ನು ಸಾರ್ವಜನಿಕವಾಗಿ ಟೀಕಿಸಿದ ಎಲ್ಲರನ್ನು ಟಾರ್ಗೆಟ್ ಮಾಡುವುದರ ವಿರುದ್ಧ ಪ್ರತಿಭಟಿಸುತ್ತಿದ್ದರು. ಈ ಪ್ರತಿರೂಪಗಳು, ಸರಕಾರದ ಕೈಯಡಿಯಲ್ಲಿ ಸತ್ತ, ಕಾಣೆಯಾದ ಹತ್ತಾರು ಸಾವಿರ ಜನ, “ದೆಸಪರೆಸಿಡೋಸ್’ ರ ನೆನಪಿನ ಕುರುಹಾಗಿದೆ. ಈಗ ನನ್ನಂಥ ಭೇಟಿ ಕೊಡುವ ವೀಕ್ಷಕರಿಗೆ, ಸಾರ್ವಜನಿಕ ಪ್ರತಿಭಟನೆ ಹಾಗೂ ಸಾಮುದಾಯಿಕ ಸತ್ವ ಅರ್ಜೆಂಟೀನಾದಲ್ಲಿ ಹಾಸುಹೊಕ್ಕಾಗಿರುವುದು ಮನಗಾಣುವಂತೆ ಮಾಡಿದೆ.
ಲಾಕ್ ಡೌನ್ ಶುರುವಾಗಿ ಮೂರು ತಿಂಗಳ ಅನಂತರ ಸರಕಾರ ಜನರು ಹೊರಾಂಗಣದಲ್ಲಿ ದೈಹಿಕ ವ್ಯಾಯಾಮಕ್ಕೆ ಎಡೆ ಮಾಡಿಕೊಟ್ಟಿತು. ಲಾಕ್‌ಡೌನ್ ಅಲ್ಲದಿದ್ದರೆ ಪ್ಲಾಜಾ ದ ಮಯೋ ವನ್ನು ಪ್ರತಿದಿನವೂ ವಿಶ್ವವಿದ್ಯಾಲಯದ ದಾರಿಯಲ್ಲಿ ಹಾದು ಹೋಗಬೇಕಾಗಿತ್ತು. ಆದರೆ ಈಗ ಸಡಿಲಗೊಂಡ ಪರಿಸ್ಥಿತಿಯಿಂದಾಗಿ ಗೆಳತಿಯ ಜತೆ ಸ್ಮಾರಕವನ್ನು ಮತ್ತೆ ನೋಡಲು ಹೋದೆ. ಸೆಮಿಸ್ಟರ್ ಕ್ಲಾಸ್‌ನಲ್ಲಿ ಈ ನಗರ ಹಾಗೂ ಸಂಸ್ಕೃತಿಯ ಬಗ್ಗೆ ಕಲಿತದ್ದರಿಂದ ಈ ಎರಡನೇ ಭೇಟಿ ತುಂಬಾ ಭಿನ್ನವಾಗಿತ್ತು.
ಇಲ್ಲಿರುವ ಸ್ಪಾನಿಷ್ ಕಾಂಕಿಸ್ಟೇಡಾರ್ಸ್ ಕಟ್ಟಿದ ಭಾಗವು ಈ ಪ್ರದೇಶದ ಮೂಲನಿವಾಸಿಗಳು ಸಾಮೂಹಿಕವಾಗಿ ಸೇರಲು ಅನುವಾಗುವಂತಿದ್ದು, ಈಗ ಹಲವಾರು ಬದಲಾವಣೆಗಳನ್ನು ಕಂಡಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ಪಾನಿಷ್ ವಸಾಹತುವಿನ ನೆನಪನ್ನು ಅಳಿಸಿಹಾಕುವ ಪ್ರಯತ್ನವಾಗಿ ಹಲವು ಕಟ್ಟಡ ಹಾಗೂ ವಾಸ್ತುಶಿಲ್ಪಿಯ ಅಂಗಗಳನ್ನು ಅಳಿದು ಮರುಕಟ್ಟಲಾಗಿದೆ.
ಪ್ಲಾಜಾ ದೆ ಮಾಯೋ ದ ಇನ್ನೊಂದು ಭಾಗದಲ್ಲಿ ಕಾಸಾ ರೊಸಾದ (ಗುಲಾಬಿ ಮನೆ) ದೇಶದ ಅಧ್ಯಕ್ಷರ ಮನೆ ಹಾಗೂ ಆಫೀಸು ಕಾಣುತ್ತದೆ. ಹಿಂದಿನಂತೆ ಇಂದಿಗೂ ಪ್ರತಿಭಟನೆಗಳು ಆ ಕಟ್ಟಡದ ಎದುರೇ ನಡೆಯುತ್ತದೆ.
2020ರ ಮಾರ್ಚ್‌ನ ಮೊದಲ ದಿನಗಳಲ್ಲಿ ಈ ನಗರಕ್ಕೂ, ದೇಶಕ್ಕೂ ಲಾಕ್‌ಡೌನ್‌ನ ಯಾವುದೇ ಯೋಚನೆಗಳಿಲ್ಲದೆ ಪ್ರವಾಸಿಗರು ಇಲ್ಲಿ ಬೇಸಗೆಯ ಬಿಸಿ ಹವೆಯಲ್ಲೂ ತುಂಬಿದ್ದರು. ಈಗ, ಗಸ್ತು ಹೊಡೆಯುವ ಸೆಕ್ಯುರಿಟಿ ಗಾರ್ಡ್‌ಗಳ ಹಿಂದಿಂದ ಕಟ್ಟಡವು ಖಾಲಿ ಪ್ಲಾಜಾವನ್ನು ವೀಕ್ಷಿಸುತ್ತಿರುವಂತಿದೆ.
– ತನ್ಮಯ ನವಡಾ, ಅರ್ಜೆಂಟೀನಾ