“ಕಣ್ಣೇ ಅದಿರಿಂದಿ’ ಎಂದು ಕನ್ನಡಿಗರ ಹೃದಯಕ್ಕೆ ಬಾಣ ಬಿಟ್ಟಿದ್ದ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ, ಈಗ ಕನ್ನಡದ ಗಾಯಕಿಯೇ ಆಗಿ ಬಿಟ್ಟಿದ್ದಾರೆ. ಇದೀಗ ಮಂಗ್ಲಿ ಇದೇ ಮೊದಲ ಬಾರಿ ತುಳು ಸಿನಿಮಾವೊಂದರ ಹಾಡಿಗೆ ಧ್ವನಿಯಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ತುಳು ಜನತೆಯ ಮನಗೆಲ್ಲಲು ಸಜ್ಜಾಗಿದ್ದಾರೆ.
ಎ.ಆರ್. ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅರುಣ್ ರೈ ತೋಡಾರ್ ನಿರ್ಮಾಣ, ಎಸ್.ವಿ.ಬಾಬು ರಾಜೇಂದ್ರ ಸಿಂಗ್ ನಿರ್ದೇಶನದ “ಬಿರ್ದ್ ದ ಕಂಬಳ’ ಮತ್ತು “ಕನ್ನಡದ ವೀರ ಕಂಬಳ’ ಸಿನಿಮಾಕ್ಕೆ ಹಾಡಿದ್ದಾರೆ. ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಹಾಡು ಹಾಡಿರುವುದು ವಿಶೇಷ.
ತುಳುವಿನ ಕೆ.ಕೆ.ಪೇಜಾವರ, ಕನ್ನಡದ ರಘು ಶಾಸ್ತ್ರಿಅವರ ಸಾಹಿತ್ಯಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಕುರಿತು ತುಳು ಮತ್ತು ಕನ್ನಡದಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಸಂಪೂರ್ಣ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿರದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ನಡೆದಿದೆ.
ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್’ನ ಗ್ಯಾರಂಟಿ ಸುಳ್ಳಿನ ಸರಣಿಯ ಮುಂದುವರಿದ ಭಾಗ : ಬಿಜೆಪಿ
Related Articles
ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾದ ಶ್ರೀನಿವಾಸ ಗೌಡ ಹಾಗೂ “ಕಾಂತಾರ’ ಚಿತ್ರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟ ಆದಿತ್ಯ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನವೀನ್ ಡಿ ಪಡಿಲ್ ಬೋಜರಾಜ ವಾಮಂಜೂರು ಉಷಾ ಭಂಡಾರಿ, ರಾಧಿಕಾ ನಾರಾಯಣ, ಗೋಪಿನಾಥ್ ಭಟ್ ನಟಿಸಿದ್ದಾರೆ.
ಚಿತ್ರಕ್ಕೆ ವಿಜಯ ಕುಮಾರ್‌ಕೊಡಿಯಾಲ್ ಬೈಲ್ ಚಿತ್ರಕಥೆ- ಸಂಭಾಷಣೆ, ಶ್ರೀನಿವಾಸ್ ಬಾಬು ಸಂಕಲನ, ಗಿರಿ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಸಾಹಸವಿದೆ. ಈಗಾಗಲೇ ಚಿತ್ರೀಕರಣ ಕೊನೇ ಹಂತದಲ್ಲಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ.