ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆ ಕಣ ತೀವ್ರ ರಂಗೇರಿದ್ದು ನಾಲ್ಕು ಸ್ಥಾನಗಳಿಗೆ ಐವರು ಅಖಾಡದಲ್ಲಿದ್ದು ಮೂರೂ ಪಕ್ಷಗಳಿಗೆ ಕುದುರೆ ವ್ಯಾಪಾರ ಭೀತಿ ಶುರುವಾಗಿದೆ. ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಗುರುವಾರ ಯಾರೊಬ್ಬರೂ ಕಣದಿಂದ ಹಿಂದೆ ಸರಿಯದಿರುವುದರಿಂದ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ರಹಸ್ಯ ಕಾರ್ಯತಂತ್ರದಲ್ಲಿ ತೊಡಗಿವೆ.
ಸಂಖ್ಯಾಬಲದ ಮೇಲೆ ಬಿಜೆಪಿ ಸುಲಭವಾಗಿ ತನ್ನ ಓರ್ವ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿದ್ದು ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಗೆಲ್ಲಲು ಎರಡು ಮತಗಳ ಕೊರತೆ ಎದುರಾಗಲಿದೆ. ಜೆಡಿಎಸ್‌ಗೆ 14 ಮತಗಳ ಕೊರತೆಯಿದ್ದರೂ ಯಾವ ಧೈರ್ಯದ ಮೇಲೆ ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲೆಕೆಡಿಸಿಕೊಂಡಿವೆ.
ಪಕ್ಷೇತರರು, ಕೆಲವು ಕಾಂಗ್ರೆಸ್, ಬಿಜೆಪಿ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲಿದ್ದಾರೆ. ಈಗಾಗಲೇ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಏಳು ಬಂಡಾಯ ಶಾಸಕರು ಈ ಬಾರಿ ಕಾಂಗ್ರೆಸ್ ಪರ ಮತದಾನ ಮಾಡದಂತೆ ಜೆಡಿಎಸ್ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಅದು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದುನೋಡಬೇಕಾಗಿದೆ. ಕಾಂಗ್ರೆಸ್‌ನ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, 2 ಮತಗಳ ಕೊರತೆಯಿದೆ. ದ್ವಿತೀಯ ಪ್ರಾಶಸ್ತ್ಯದ ಮತಗಳು ಮತ್ತು ಜೆಡಿಎಸ್‌ನ ಬಂಡಾಯ ಶಾಸಕರಲ್ಲದೆ ಇತರೆ ಜೆಡಿಎಸ್ ಶಾಸಕರ ಮತಗಳಿಗೂ ಗಾಳ ಹಾಕಲಾಗಿದೆ ಎಂಬ ಮಾತುಗಳು ಇವೆ.
ಯಾರೂ ಹಿಂಪಡೆದಿಲ್ಲ: ನಾಮಪತ್ರ ವಾಪಸ್ ಪಡೆಯಲು ಗುರುವಾರ ಮಧ್ಯಾಹ್ನ 3 ಗಂಟೆವರೆಗೂ ಕಾಲಾವಕಾಶ ಇತ್ತಾದರೂ ಯಾರೂ ವಾಪಸ್ ಪಡೆಯಲಿಲ್ಲ. ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ, ರಾಜ್ಯಸಭೆಯ 4 ಸ್ಥಾನಗಳಿಗೆ ಐವರು ನಾಮಪತ್ರ ಸಲ್ಲಿಸಿದ್ದು ಯಾರೂ ನಾಮಪತ್ರ ವಾಪಸ್ ಪಡೆಯದ ಕಾರಣ ಮಾ. 23ರಂದು ಚುನಾವಣೆ ನಡೆಯಲಿದೆ ಎಂದರು.
224 ಸಂಖ್ಯಾಬಲದ ವಿಧಾನಸಭೆಯಲ್ಲಿ ರಾಜೀನಾಮೆ ಹಾಗೂ ನಿಧನ ಹಿನ್ನೆಲೆಯಲ್ಲಿ ಏಳು ಸ್ಥಾನ ತೆರವಾಗಿದ್ದು 217 ಶಾಸಕರು ಮತದಾನದ ಹಕ್ಕು ಹೊಂದಿದ್ದಾರೆ. ಮತದಾನ ಕುರಿತು ಎಲ್ಲ ಶಾಸಕರಿಗೂ ಮಾಹಿತಿ ಕಳುಹಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಅಭ್ಯರ್ಥಿ ಗೆಲ್ಲಲು ಎಷ್ಟು ಮತ ಪಡೆಯಬೇಕು ಎಂಬ ಪ್ರಶ್ನೆಗೆ, ಪ್ರತಿ ಸದಸ್ಯನ ಮತ ಮೌಲ್ಯ 100. ಆದರೆ ಅಂದು ಎಷ್ಟು ಶಾಸಕರು ಮತದಾನ ಮಾಡಲಿದ್ದಾರೆ. ಪುರಸ್ಕೃತ ಎಷ್ಟು? ಒಂದೊಮ್ಮೆ ಇದ್ದರೆ ತಿರಸ್ಕೃತ ಎಷ್ಟು ಎಂಬುದರ ಆಧಾರದ ಮೇಲೆ ಗೆಲ್ಲಲು ಎಷ್ಟು ಮತ ಎಂಬುದು ನಿರ್ಧಾರವಾಗುತ್ತದೆ ಎಂದರು.
ಜೆಡಿಎಸ್‌ನ 7 ಬಂಡಾಯ ಶಾಸಕರು ಕಳೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿರುವ ಬಗ್ಗೆ
ಸ್ಪೀಕರ್‌ಗೆ ಕೊಟ್ಟಿರುವ ದೂರಿನ ಬಗ್ಗೆ ಇನ್ನೂ ಕ್ರಮ ಕೈಗೊಳ್ಳದಿರುವ ಬಗ್ಗೆ ಕೇಳಿದಾಗ, ಆ ವಿಚಾರ ಸಭಾಧ್ಯಕ್ಷರ ಮುಂದಿದ್ದು ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ.
ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು
ಡಾ|ಎಲ್. ಹನುಮಂತಯ್ಯ (ಕಾಂಗ್ರೆಸ್)
ನಾಸಿರ್ ಹುಸೇನ್ (ಕಾಂಗ್ರೆಸ್)
ಜಿ.ಸಿ.ಚಂದ್ರಶೇಖರ್ (ಕಾಂಗ್ರೆಸ್)
ರಾಜೀವ್‌ಚಂದ್ರಶೇಖರ್ (ಬಿಜೆಪಿ)
ಬಿ.ಎಂ.ಫಾರೂಕ್ (ಜೆಡಿಎಸ್)