Advertisement

ಉಡುಪಿ ರೈಲು ನಿಲ್ದಾಣ: ಬೇಕಿದೆ ಪ್ಲಾಟ್‌ಫಾರಂ ಮೇಲ್ಛಾವಣಿ

01:00 AM Feb 19, 2019 | Team Udayavani |

ಮಣಿಪಾಲ: ತುಳು ಕರಾವಳಿಯನ್ನು ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬಯಿಗೆ ಬೆಸೆಯುವ ಕೊಂಕಣ್‌ ರೈಲ್ವೆಯ ಉಡುಪಿ ರೈಲು ನಿಲ್ದಾಣವು ರತ್ನಗಿರಿ ಮತ್ತು ಮಡ್‌ಗಾಂವ್‌ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ಸಾಮಾನ್ಯ ವಾಣಿಜ್ಯ ವಹಿವಾಟು ಇರುವ ನಿಲ್ದಾಣ. ದಿನವೊಂದಕ್ಕೆ  2ರಿಂದ 3 ಸಾವಿರ ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದರೂ  ಮೂಲ ಆವಶ್ಯಕತೆ ಪೂರೈಸುವಲ್ಲಿ 2 ದಶಕದ ಇತಿಹಾಸ ಹೊಂದಿರುವ ಈ ನಿಲ್ದಾಣ ಪೂರ್ಣ ಪ್ರಮಾಣದ ಯಶ ಕಂಡಿಲ್ಲ. 

Advertisement

ಬೇಕಿದೆ ಛಾವಣಿ ವ್ಯವಸ್ಥೆ 
ರೈಲು ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಿದ್ದು ಬಿಸಿಲು/ ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ಛಾವಣಿ ವ್ಯವಸ್ಥೆಯ ಅಗತ್ಯವಿದೆ. ಒಂದನೇ ಪ್ಲಾಟ್‌ಫಾರ್ಮ್ನಲ್ಲಿ ಕೋಚ್‌ ಪೊಸಿಶನ್‌ 1ರಿಂದ 3ರ ವರೆಗೆ ಛಾವಣಿ ಇಲ್ಲ, 4ರಲ್ಲಿ ಸಣ್ಣ ಛಾವಣಿ ಇದ್ದು ಅಲ್ಲಿಂದ 8ರ ವರೆಗೆ ಸಣ್ಣ ತಂಗುದಾಣ ಹೊರತು ಪಡಿಸಿ ಪೂರ್ಣ ಛಾವಣಿ ಇಲ್ಲ. 8ರಿಂದ 12ರ ವರೆಗೆ ರೈಲು ನಿಲ್ದಾಣ ಪ್ರವೇಶ ದ್ವಾರಕ್ಕೆ ಸರಿಯಾಗಿ ಛಾವಣಿ ಇದೆಯಾದರೂ ಅದರ ಬಳಿಕ 12ರಿಂದ 24ರ ವರೆಗೆ ನಡುವಿನ ಸಣ್ಣ ಛಾವಣಿಗಳನ್ನು ಹೊರತುಪಡಿಸಿ ಪೂರ್ಣ ಛಾವಣಿ ಇಲ್ಲ. 2ನೇ ಪ್ಲಾಟ್‌ಫಾರಂನಲ್ಲಿ ಕೆಲವೇ ಛಾವಣಿಗಳಿವೆ. 

ಯಾವಾಗ/ಯಾರಿಗೆ ಸಮಸ್ಯೆ?
ಕೇವಲ ಒಂದೆರಡು ನಿಮಿಷ ನಿಲ್ಲುವ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿರುತ್ತಾರೆ. ಅವರಲ್ಲಿ ವೃದ್ಧರು/ಮಹಿಳೆಯರು/ರೋಗಿಗಳು ಇರುತ್ತಾರೆ. ಬಿಸಿಲು/ಮಳೆ ಇರುವಾಗ ಅವರು ಲಗೇಜ್‌ನೊಂದಿಗೆ ಛಾವಣಿ ಇರುವ ಸ್ಥಳದಿಂದ ರೈಲಿಗೆ ಹತ್ತುವುದು ಅಥವಾ ರೈಲಿನಿಂದ ಛಾವಣಿ ವರೆಗೆ ಬರಲು ಹರಸಾಹಸ ಪಡಬೇಕಾಗುತ್ತದೆ. ಕಡಿಮೆ ನಿಲುಗಡೆ ಸಮಯ ಇರುವುದರಿಂದ ವೃದ್ಧರು/ರೋಗಿಗಳು ಬಿಸಿಲು/ಮಳೆಗೆ ಮೈಯೊಡ್ಡಿ ಛಾವಣಿ ಇಲ್ಲದ ಕೋಚ್‌ ಪೊಸಿಶನ್‌ನಲ್ಲಿ ಕಾಯುವುದು ಅನಿವಾರ್ಯವಾಗುತ್ತದೆ. 

ರೋಗಿಗಳಿಗೆ ಅನುಕೂಲ
ಮಣಿಪಾಲದ ಆಸ್ಪತ್ರೆಗೆ ರೈಲಿನ ಮೂಲಕ ಹಲವಾರು ರೋಗಿಗಳು ಆಗಮಿಸುತ್ತಾರೆ. 
ಅವರಿಗಾಗಿ ಮತ್ತು ವೃದ್ಧರು, ಅಶಕ್ತರಿಗಾಗಿ ಮೇಲ್ಸೇತುವೆ ಬಳಿ ಎಸ್ಕಲೇಟರ್‌ ಇದ್ದರೆ ತುಂಬಾ ಅನುಕೂಲ. 

ಸ್ಫೋಟಕ/ಲೋಹ ಶೋಧಕ ಬೇಕು
ಸಾವಿರಾರು ಜನರು ಆಗಮಿಸುವ ರೈಲು ನಿಲ್ದಾಣದಲ್ಲಿ ಬ್ಯಾಗ್‌ ಸ್ಕ್ಯಾನರ್‌, ಮೆಟಲ್‌ ಹಾಗೂ ಬಾಂಬ್‌ ಡಿಟೆಕ್ಟರ್‌ ಅಳವಡಿಸಬೇಕಿದೆ. ಪ್ರಸ್ತುತ ಈ ವ್ಯವಸ್ಥೆ ಇದ್ದರೂ ವಿಶೇಷ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. 

Advertisement

ಸ್ವತ್ಛತೆಗೆ ಸಾಟಿಯಿಲ್ಲ
ರೈಲು ನಿಲ್ದಾಣದಲ್ಲಿ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಫ್ಲ್ಯಾಟ್‌ಫಾರಂ, ಟ್ರ್ಯಾಕ್‌ಗಳು, ಶೌಚಾಲಯಗಳು, ಹೊರಾವರಣದಲ್ಲಿ ಎಲ್ಲಿಯೂ ಸ್ವತ್ಛತಾ ಲೋಪ ಕಂಡು ಬರುವುದಿಲ್ಲ. ಸಿಬಂದಿ ಆಗಾಗ ಸ್ವತ್ಛತೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.  

ಪರಿಶೀಲನೆ
ಹೆಚ್ಚುವರಿ ಛಾವಣಿ ಮತ್ತು ಪಾರ್ಸೆಲ್‌ ಕೊಠಡಿ ನಿರ್ಮಾಣ ಪ್ರಸ್ತಾವ ಇದ್ದು, ನಿಯಮಾನುಸಾರ ಪರಿಶೀಲಿಸ ಲಾಗುವುದು.
-ಸುಧಾ ಕೃಷ್ಣಮೂರ್ತಿ, ಪಿಆರ್‌ಒ

ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಲಿ
ಲಭ್ಯ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದ್ದರೂ ನಿಲ್ದಾಣದಲ್ಲಿ ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಸಾಕಷ್ಟು ಸಾಧ್ಯತೆಗಳು, ಸ್ಥಳಾವಕಾಶ ಇದೆ. ಹಿಂದೆ ನೆಲ ಅಂತಸ್ತಿನಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಈಗ ಇದನ್ನು ಸ್ಥಗಿತಗೊಳಿಸಲಾಗಿದೆ. ಹೊರ ಭಾಗದಲ್ಲೇ ಪಾರ್ಕಿಂಗ್‌ಗೆ ಶುಲ್ಕ ಪಾವತಿಸಿದರೆ ಅವಕಾಶ ನೀಡಲಾಗುತ್ತಿದೆ. 

ಸಹಭಾಗಿತ್ವದಿಂದ ಸಾಧ್ಯ
ರೈಲು ನಿಲ್ದಾಣದಲ್ಲಿ ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ 3 ಛಾವಣಿ, 60 ಬೆಂಚುಗಳು ಮತ್ತು ಪ್ರೀಪೇಯ್ಡ ರಿಕ್ಷಾ ಕೌಂಟರ್‌ ಮಾಡಿದ್ದೇವೆ. ಸಮರ್ಪಕ ಛಾವಣಿ ಮಾಡಲು ಸಾರ್ವಜನಿಕರು ಕೊಂಕಣ್‌ ರೈಲ್ವೇಯೊಂದಿಗೆ ಕೈಜೋಡಿಸುವ ಅಗತ್ಯವಿದೆ. 
-ಆರ್‌.ಎಲ್‌. ಡಯಾಸ್‌, ರೈಲ್ವೇ ಯಾತ್ರಿ ಸಂಘ ಅಧ್ಯಕ್ಷ 

ಎಸ್ಕಲೇಟರ್‌ ಬೇಕು
ಪ್ಲಾಟ್‌ಫಾರಂ ಬದಲಿಸುವ ಸೇತುವೆ ಹತ್ತಲು/ಇಳಿಯಲು ಎಸ್ಕಲೇಟರ್‌ ಇದ್ದರೆ ಉತ್ತಮ. ಈಗ ಇರುವ ಎಸ್ಕಲೇಟರ್‌ ಅಷ್ಟು ಬಳಕೆಯಾಗುತ್ತಿಲ್ಲ. 
-ದಿನಕರ, ನಿತ್ಯ ಪ್ರಯಾಣಿಕ 

ಅರ್ಧ ಉದ್ಯಾನ ತೆರವು
ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲು ನಿಲ್ದಾಣದ ಮುಂಭಾಗದಲ್ಲಿ ಶ್ರೀಕೃಷ್ಣನ ಮೂರ್ತಿಯ ಎಡ ಭಾಗದಲ್ಲಿರುವ ಉದ್ಯಾನವನ್ನು ತೆಗೆಯಲಾಗಿದೆ. ಇದರಿಂದ ನಿಲ್ದಾಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಬೇರೆ ಸ್ಥಳಾವಕಾಶದ ಸಾಧ್ಯತೆಗಳನ್ನು ಬಳಸಿಕೊಳ್ಳಲಾಗಿಲ್ಲ. 3-4ದಿನದಿಂದ ಒಂದು ವಾರದ ವರೆಗೆ ವಾಹನ ನಿಲ್ಲಿಸಿ ಹೋಗುವವರೂ ಛಾವಣಿ ಇಲ್ಲದಿರುವುದರಿಂದ ತೆರೆದ ಪ್ರದೇಶದಲ್ಲೇ ವಾಹನ ನಿಲುಗಡೆ ಮಾಡಬೇಕಿದೆ. 

– ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next