Advertisement

ಚುನಾವಣಾ ಪ್ರಚಾರ, ವಾಗ್ಧಾಳಿ, ಆಶ್ವಾಸನೆಗೆ ವೇದಿಕೆ ಸಿದ್ಧ

04:51 PM Mar 13, 2018 | Team Udayavani |

ದಾವಣಗೆರೆ: ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಇಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಹಾಗೂ ಜಿಲ್ಲೆಯ ಇತರೆ ಭಾಗದ ಅಭಿವೃದ್ಧಿಗೆ ಪೂರಕ ಭರವಸೆ, ಆಶ್ವಾಸನೆ ನೀಡುವರೇ ಎಂಬ ನಿರೀಕ್ಷೆ ಗರಿಗೆದರಿದೆ.

Advertisement

2013ರ ಚುನಾವಣೆಗೆ ಮುನ್ನ ದಾವಣಗೆರೆಯಲ್ಲಿ ನಡೆದಿದ್ದ ಹಾಲುಮತ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಹಾಲುಮತ ಮಹೋತ್ಸವ ಸಿದ್ದರಾಮಯ್ಯ ಅವರನ್ನು ಅಧಿಕಾರದ ಗದ್ದುಗೆಗೆ ತರುವಲ್ಲಿ ಮಹತ್ತರ ಭೂಮಿಕೆ ವಹಿಸಿತ್ತು. ಹಾಗಾಗಿ ದಾವಣಗೆರೆಯ ಬಗ್ಗೆ ಸಿದ್ದರಾಮಯ್ಯಗೆ ವಿಶೇಷ ಒಲವು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ವರ್ಷದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪನವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಆ ನಂತರ ಹೆಚ್ಚಾಗಿ ದಾವಣಗೆರೆ ಮತ್ತು ಜಿಲ್ಲೆಯ ಇತರೆಡೆ ಭೇಟಿಯೇ ನೀಡಿರಲಿಲ್ಲ. 2017ರಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಿದ್ದರಾಮಯ್ಯ ಅತಿ ಹೆಚ್ಚು ಬಾರಿ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದ್ದರು. ವಾರದ ಅಂತರದಲ್ಲೇ ಹರಿಹರ, ಚನ್ನಗಿರಿ, ಸೂರಗೊಂಡನಕೊಪ್ಪ, ದಾವಣಗೆರೆ, ಜಗಳೂರು, ಹರಪನಹಳ್ಳಿ, ಹೊನ್ನಾಳಿ, ಜಗಳೂರು ಆ ನಂತರ ಬೆಳ್ಳೊಡಿಗೆ ಭೇಟಿ ನೀಡಿದ್ದಾರೆ.

ನಿಯಮ ಸರಳ? ಡಿ. 26 ರಂದು ಹೊನ್ನಾಳಿ, ಹರಪನಹಳ್ಳಿ, ಜಗಳೂರುನಲ್ಲಿ ನಡೆದಿದ್ದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲಿಕ್ಕೆ ದಾವಣಗೆರೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಶಾಸಕ ಶಾಮನೂರು ಶಿವಶಂಕರಪ್ಪ, ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿನ ಕಟ್ಟುಪಾಡು ಗಳಿಂದಾಗಿಯೇ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಿಕ್ಕೆ ಆಗುವುದೇ ಇಲ್ಲ. ಹಾಗಾಗಿ ಕೆಲವಾರು ಕಟ್ಟುಪಾಡು ಸಡಿಲ ಮಾಡಬೇಕು ಎಂದು ಸ್ವಲ್ಪ ಜೋರಾಗಿಯೇ ಒತ್ತಾಯಿಸಿದ್ದರು. ಸ್ಮಾರ್ಟ್‌ಸಿಟಿ ಯೋಜನೆಗೆ
ಬಿಡುಗಡೆಯಾಗಿರುವ ಅನುದಾನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಠೇವಣಿ ಹಣಕ್ಕೆ ಬಂದ ಬಡ್ಡಿ ಮೊತ್ತದಷ್ಟು
ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿನ ಕಟ್ಟುಪಾಡುಗಳೇ 
ಎಂಬುದನ್ನು ಶಾಸಕ ಶಾಮನೂರು ಶಿವಶಂಕಪ್ಪ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಇಂದಿನ ಭೇಟಿ ಗಮನ ಸೆಳೆಯುತ್ತಿದೆ.

ಬಹುತೇಕ ಚುನಾವಣಾ ಸಿದ್ಧತೆಯಲ್ಲಿ ಇರುವ ಸಿದ್ದರಾಮಯ್ಯ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿನ ಕಟ್ಟುಪಾಡುಗಳಲ್ಲಿ 
ಕೆಲವನ್ನಾದರೂ ಸಡಿಲಗೊಳಿಸಿ, ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗೆ ವೇಗ ನೀಡುವಂತಹ ಪ್ರಯತ್ನ ಮಾಡುವರೆ ಎಂದು
ಕಾದು ನೋಡಬೇಕಿದೆ. ಧರ್ಮದ ನಿಲುವು… 2017ರ ಜೂ. 16ರಂದು ಶಾಸಕ ಶಾಮನೂರು ಶಿವಶಂಕರಪ್ಪನವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದಿನ ಸಮಾರಂಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಬಗ್ಗೆ ಸುಳಿವು ನೀಡಿದ್ದರು.

ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಈ ಕ್ಷಣಕ್ಕೂ
ವೀರಶೈವ-ಲಿಂಗಾಯತ ಒಂದೇ… ಎಂಬುದಕ್ಕೆ ಬದ್ಧರಾಗಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿನ ಕೆಲ ಸಚಿವರು ಲಿಂಗಾಯತ
ಪ್ರತ್ಯೇಕ ಧರ್ಮದ ಬಗ್ಗೆ ಗಟ್ಟಿ ನಿಲುವು ಹೊಂದಿರುವುದಲ್ಲದೆ ಕೆಲ ಬಾರಿ ಶಾಮನೂರು ಶಿವಶಂಕರಪ್ಪ ಅವರ ನಿಲುವಿನ ವಿರುದ್ಧ
ಬಹಿರಂಗವಾಗಿಯೇ ಧ್ವನಿ ಎತ್ತಿದ್ದಾರೆ. ಮಾ. 14 ರಂದು ಸಂಪುಟ ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ
ಮತ್ತೂಮ್ಮೆ ಚರ್ಚೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲೂ ಸಿದ್ದರಾಮಯ್ಯ ಭೇಟಿ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್‌ನ
ಹಿರಿಯ ನಾಯಕ, ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ
ತಾಳಿರುವ ಪ್ರಬಲ ನಿಲುವಿಗೆ ಸಿದ್ದರಾಮಯ್ಯ ಪೂರಕವಾಗಿ ತೀರ್ಮಾನ ಕೈಗೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ.
ಅತ್ತ ದರಿ… ಇತ್ತ ಪುಲಿ… ಎನ್ನುವಂತ ಅತೀ ಸೂಕ್ಷ್ಮವಾದ ಧರ್ಮದ ವಿಚಾರವಾಗಿ ಸಿದ್ದರಾಮಯ್ಯ ಇಂದಿನ ಸಭೆಯಲ್ಲಿ
ಏನಾದರೂ ನಿಲುವು ಪ್ರಕಟಿಸುವರೇ ಎಂಬುದು ಧರ್ಮಾಸಕ್ತರಲ್ಲಿ ಕುತೂಹಲ ಮೂಡಿಸಿದೆ. 

Advertisement

ತಿರುಗೇಟು ನೀಡುವರೆ… ಇನ್ನು ಇಂದಿನ ಸಮಾರಂಭ ನಡೆಯುತ್ತಿರುವ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲೇ ಬರೋಬ್ಬರಿ
15 ದಿನಗಳ ಹಿಂದೆ ನಡೆದಿದ್ದ ಅನ್ನದಾತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು
ಸಿದ್ದರಾಮಯ್ಯ ಸರ್ಕಾರ… ಸೀದಾ ರುಪಯ್ಯ ಸರ್ಕಾರ… ಎಂದು ತೀವ್ರ ವಾಗ್ಧಾಳಿ ನಡೆಸಿದ್ದರು. ಇಂದಿನ ಸಮಾರಂಭದಲ್ಲಿ ಸಿದ್ದರಾಮಯ್ಯ ಯಾವ ಯಾವ ರೀತಿ ಪ್ರಧಾನ ಮಂತ್ರಿಯವರ ಆರೋಪಕ್ಕೆ ತಿರುಗೇಟು ನೀಡುವರು ಎಂಬುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.

ಇತೀ¤ಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ ಆರೋಪಕ್ಕೆ ಅಷ್ಟೇ ತೀಕ್ಷಣ್ಣ ಟಕ್ಕರ್‌… ನೀಡುತ್ತಿರುವ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವ ರೀತಿ ವಾಗ್ಧಾಳಿ ನಡೆಸುವರು ಎಂಬ ಕಾರಣಕ್ಕೂ ಇಂದಿನ ಸಮಾರಂಭ
ಗಮನ ಸೆಳೆಯುತ್ತಿದೆ. ಅಭಿವೃದ್ಧಿ, ಧರ್ಮ, ರಾಜಕೀಯ, ಚುನಾವಣೆ… ವಿಚಾರವಾಗಿ ಸಿದ್ದರಾಮಯ್ಯನವರ ದಾವಣಗೆರೆ
ಸಮಾರಂಭ ಈ ಬಾರಿ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next