Advertisement

ಮಣ್ಣಪಳ್ಳ ಕೆರೆಯ ಒಡಲು ಸೇರುತ್ತಿರುವ ಪ್ಲಾಸ್ಟಿಕ್‌ !

11:29 AM Jul 25, 2022 | Team Udayavani |

ಮಣಿಪಾಲ: ಮಣಿಪಾಲ, ಉಡುಪಿ ಜನರಿಗೆ ಸುಂದರ ವಿಹಾರ ತಾಣವಾಗಿರುವ ಮಣ್ಣಪಳ್ಳ ಮದಗವು ನಿರ್ವಹಣೆ ಇಲ್ಲದೆ ದಿನೇ ದಿನೆ ಹದಗೆಡುತ್ತಿದೆ. ಈ ಪರಿಸರವು ತ್ಯಾಜ್ಯ ಕೊಂಪೆಯಾಗುತ್ತಿರುವ ಬಗ್ಗೆ ಉದಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು. ಮಳೆಗಾಲದಲ್ಲಿ ಕಂಗೊಳಿಸಬೇಕಿದ್ದ ಮಣ್ಣಪಳ್ಳ ಪರಿಸರವು ಕೊಚ್ಚೆ, ಕೆಸರಿನ ಪರಿಸರ, ಗಿಡಗಂಟಿಗಳಿಂದ ಕೂಡಿದ ತಾಣವಾಗಿ ಮಾರ್ಪಟ್ಟಿದ್ದು, ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಮಣ್ಣಪಳ್ಳ ಒಡಲು ಸೇರುತ್ತಿರುವುದು ಆತಂಕಕಾರಿಯಾಗಿದೆ.

Advertisement

ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡ ಕೆರೆಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿತ್ತು. ಕೆರೆಯಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಮಣಿಪಾಲ, ಉಡುಪಿ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು. ಪ್ರಸ್ತುತ ಮಣ್ಣಪಳ್ಳ ಕೆರೆ ನಿರ್ವಹಣೆ ಸಮಸ್ಯೆಯಿಂದ ನೂರೆಂಟು ಸಮಸ್ಯೆ ಎದುರಾಗಿವೆ.

ಗಿಡಗಂಟಿಗಳು ಬೆಳೆದುಕೊಂಡಿವೆ. ತ್ಯಾಜ್ಯ ರಾಶಿಗಳು ಅಲ್ಲಲ್ಲಿ ಹರಡಿ ಕೊಂಡಿವೆ. ಹಲವು ದಿನಗಳಿಂದ ಡಸ್ಟ್‌ಬಿನ್‌ಗಳಿಂದ ತ್ಯಾಜ್ಯ ತೆರವುಗೊಂಡಿಲ್ಲ. ಮಧ್ಯರಾತ್ರಿ ಮದ್ಯದ “ಪಾರ್ಟಿ’ಯೂ ನಡೆಯುತ್ತಿದ್ದು, ಮದ್ಯ, ಬಿಯರ್‌ ಬಾಟಲಿಗಳು ಅಲ್ಲಲ್ಲಿ ಬಿದ್ದಿವೆ.

ಪ್ಲಾಸ್ಟಿಕ್‌ಗಳು ತ್ಯಾಜ್ಯ

ಮಣ್ಣಪಳ್ಳಕ್ಕೆ ಹೋಗುವಾಗ ಎರಡು ಗೇಟ್‌ಗಳ ಪ್ರವೇಶ ದ್ವಾರದಲ್ಲಿ ಕೆಸರು ಕೊಂಪೆ ಸ್ವಾಗತಿಸುತ್ತದೆ. ಪಳ್ಳಕ್ಕೆ ಸಂಪರ್ಕಿಸುವ ಮಳೆ ನೀರು ಕಾಲುವೆಯಲ್ಲಿ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳು ಕೆರೆಗೆ ಸೇರುತ್ತಿರುವುದು ಕಳವಳಕಾರಿಯಾಗಿದೆ. ಪರಿಸರದಲ್ಲಿ ಅಲ್ಲಲ್ಲಿ ಹರಡಿರುವ ತ್ಯಾಜ್ಯ, ಮದ್ಯದ ಬಾಟಲಿ, ಚಾಕೊಲೆಟ್‌, ಬಿಸ್ಕೆಟ್‌, ಚಾಟ್ಸ್‌ ಮಾಸಾಲ ಪ್ಯಾಕ್ಸ್‌ ತಿಂಡಿಗಳ ರ್ಯಾಪರ್‌ಗಳ ರಾಶಿ ರಾಶಿ ಬಿದ್ದಿವೆ. ಮಳೆಯಲ್ಲಿ ಈ ಎಲ್ಲ ತ್ಯಾಜ್ಯಗಳು ಕೆರೆಗೆ ಸೇರುತ್ತಿದೆ.

Advertisement

ಕೆರೆಯನ್ನೇ ನಂಬಿದ ಜೀವ ವೈವಿಧ್ಯಕ್ಕೆ ಕಂಟಕ

ಇಲ್ಲಿಗೆ ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಮಣಿಪಾಲ ಬರ್ಡರ್ಸ್‌ ಕ್ಲಬ್‌ 100ಕ್ಕೂ ಅಧಿಕ ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಿದೆ. ವಿವಿಧ ಜಾತಿಯ ಮೀನುಗಳು, ವಿಶಿಷ್ಟ ಜಲಚರಗಳು ಇಲ್ಲಿವೆ. ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಸಮಸ್ಯೆ ಉಂಟಾಗಬಹುದು. ಕಸದ ತೊಟ್ಟಿ ಇಲ್ಲಿದ್ದರೂ ಪ್ರಯೋಜನವಿಲ್ಲ, ಕೆಲವರು ಹೊರಗಡೆಯೇ ಬಿಸಾಡುತ್ತಾರೆ. ಅಲ್ಲದೆ ಇಲ್ಲಿ ಮೀನು ಹಿಡಿಯುವುದು ನಿಷೇಧವಿದ್ದರೂ ಕೆಲವರು ಗಾಳ ಹಾಕಿ ಮೀನು ಹಿಡಿಯುವ ಬಗ್ಗೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಕೆಲವರು ತಿಂಡಿ, ಚಾಕೊಲೆಟ್‌, ಆಹಾರ ಪದಾರ್ಥಗಳನ್ನು ತಂದು ಸೇವಿಸುತ್ತಾರೆ. ತ್ಯಾಜ್ಯ ನಿರ್ವಹಣೆ ಜಾಗ್ರತಿ ಇಲ್ಲದವರು ಕಸದ ತೊಟ್ಟಿಗೆ ಎಸೆಯದೆ, ಬೇರೆ ಬೇರೆ ಜಾಗದಲ್ಲಿ ಕಸಗಳನ್ನು ಎಸೆಯುತ್ತಾರೆ.

ಸ್ಥಳೀಯರ ಸಮಿತಿ ರಚಿಸಲು ಪಟ್ಟು

ಮಣ್ಣಪಳ್ಳ ಪರಿಸರ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲು ನಗರಸಭೆಗೆ ಹಸ್ತಾಂತರಿಸಬೇಕು ಮತ್ತು ಸ್ಥಳೀಯರ ಸಮಿತಿ ರಚಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಜಿಲ್ಲಾಡಳಿತ ಇದರ ನಿರ್ವಹಣೆ ನೋಡುತ್ತಿದ್ದು, ಇದು ವ್ಯವಸ್ಥಿತವಾಗಿ ಆಗುತ್ತಿಲ್ಲ. ಇಲ್ಲಿನ ಮೂರ್ನಾಲ್ಕು ಸ್ಥಳೀಯ ಸಂಘ, ಸಂಸ್ಥೆಗಳನ್ನು ಒಳಗೊಂಡು ಸಮಿತಿ ರಚನೆಯಾಗಿ, ನಗರಸಭೆಯಿಂದ ನಿರ್ವಹಣೆಗೊಳಪಟ್ಟಲ್ಲಿ ಉತ್ತಮ ಎಂದು ಬಹುತೇಕರ ಅಭಿಪ್ರಾಯವಾಗಿದೆ.

ಅಭಿವೃದ್ಧಿಗೆ ಕ್ರಮ: ಮಣ್ಣಪಳ್ಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿ ಈಗಾಗಲೇ ಒಂದು ಸಭೆಯನ್ನು ನಡೆಸಿದ್ದೇವೆ. ಮಳೆಗಾಲ ಮುಗಿದ ತತ್‌ಕ್ಷಣ ಮಣ್ಣಪಳ್ಳ ಅಭಿವೃದ್ಧಿಗೆ ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು. ಮಣ್ಣಪಳ್ಳ ನಿರ್ವಹಣೆಗೆ ಸಂಬಂಧಿಸಿ ಸ್ಥಳೀಯರನ್ನು ಒಳಗೊಂಡ ಸಮಿತಿ ರಚಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. – ಕೂರ್ಮಾರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

ಅಭಿವೃದ್ಧಿಗೆ ಕ್ರಮ: ಕೆರೆ ಪರಿಸರದಲ್ಲಿ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿಗೊಳಿಸಲು ಸೂಚನೆ ನೀಡಲಾಗಿದೆ. ಮಣ್ಣಪಳ್ಳ ಅಭಿವೃದ್ಧಿಗೆ ಶಾಸಕರ ಬಳಿ ಚರ್ಚಿಸಿದ್ದು, ಡಿಸಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮತ್ತೂಮ್ಮೆ ಜಿಲ್ಲಾಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. – ಕಲ್ಪನಾ ಸುಧಾಮ, ನಗರಸಭೆ ಸದಸ್ಯರು

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next