Advertisement
ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ದಿನ ನಿತ್ಯದ ವ್ಯವಹಾರಗಳಲ್ಲಿ ಅರಿವಿಲ್ಲದಂತೆಯೇ ಅದೆಷ್ಟೋ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿದ್ದೇವೆ. ಪ್ಲಾಸ್ಟಿಕ್ ಸಂಪೂರ್ಣ ನಾಶ ಹೊಂದದ ವಸ್ತು ಎಂಬ ಅರಿವಿದ್ದರೂ ಬಳಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ಗಳ ಉತ್ಪಾದನೆ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಹಲವು ಕ್ರಮ ಕೈಗೊಳ್ಳುತ್ತಿದ್ದರೂ ಸಂಪೂರ್ಣ ಫಲಪ್ರದವಾಗಿಲ್ಲ. ಹೀಗಿರುವಾಗ ಪ್ರತಿಯೊಬ್ಬರೂ ಕನಿಷ್ಠ ಪಕ್ಷ ನಮ್ಮ ಮನೆಯಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಸಿದಲ್ಲಿ ಮಾತ್ರ ಇವುಗಳ ನಿರ್ಮೂಲನೆ ಸಾಧ್ಯ.
ಮನೆಯಲ್ಲಿಯೇ ಆಹಾರ ತಯಾರಿಸುವುದರಿಂದ ನೀವು ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಯಂತ್ರಿಸಬಹುದು. ಹೌದು, ಇತ್ತೀಚೆಗೆ ಆನ್‌ಲೈನ್‌ಗಳಲ್ಲಿ ಆರ್ಡರ್ ಮಾಡಿ ಆಹಾರ ತರಿಸುವ ಸಂಪ್ರದಾಯ ಹೆಚ್ಚುತ್ತಿದ್ದು, ಆಹಾರದ ಜತೆ ಪ್ಲಾಸ್ಟಿಕ್‌ಗಳು ನಮ್ಮ ಮನೆ ಸೇರುತ್ತಿವೆ. ಆಹಾರಗಳನ್ನು ಪ್ಯಾಕ್ ಮಾಡಲು ತಯಾರಕರು ಪ್ಲಾಸ್ಟಿಕ್‌ಗಳನ್ನೇ ನೆಚ್ಚಿಕೊಂಡಿರುವುದು ಇದಕ್ಕೆ ಕಾರಣ.
Related Articles
ಸಾಮಾನ್ಯವಾಗಿ ಮಕ್ಕಳು ಸಿಕ್ಕ ವಸ್ತುಗಳನ್ನೆಲ್ಲ ಬಾಯಿಗೆ ಹಾಕುವ ಕಾರಣ ಸಾಧ್ಯವಾದಷ್ಟು ಪ್ಲಾಸ್ಟಿಕ್ ಆಟಿಕೆಗಳನ್ನು ಕೊಡಿಸದಿರಿ. ಮರದಿಂದ ತಯಾರಿಸಿದ ವಿವಿಧ ಬಗೆಯ ಮರದ ಆಟಿಕೆಗಳು ಸಿಗುತ್ತಿರುವ ಕಾರಣ ಆದಷ್ಟು ಅವುಗಳ ಮೊರೆಹೋಗಿ. ಇದರಿಂದ ಮಕ್ಕಳ ಆರೋಗ್ಯ ಕಾಪಾಡುವ ಜತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕೊಂಚ ನಿಯಂತ್ರಿಸಬಹುದು.
Advertisement
ಸ್ಟೀಲ್ ಅಥವಾ ಗ್ಲಾಸ್ ವಸ್ತುಗಳ ಬಳಕೆಆಹಾರ ಪದಾರ್ಥಗಳ ಸೇವನೆಗೆ ಆದಷ್ಟು ಸ್ಟೀಲ್ ಅಥವಾ ಪಿಂಗಾಣಿಯಿಂದ ತಯಾರಿಸಲ್ಪಟ್ಟ ವಸ್ತುಗಳನ್ನೇ ಬಳಸಿ. ಸ್ಟೀಲ್ ಪ್ಲೇಟ್‌ಗಳು, ಸ್ಟೇನ್‌ಲೆಸ್ ಸ್ಟೀಲ್ ಬೌಲ್‌ಗಳು, ಗ್ಲಾಸ್ ಜಾರ್, ಮಗ್‌ಗಳು ವಿವಿಧ ವಿನ್ಯಾಸಗಳಲ್ಲಿ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ಲಾಸ್ಟಿಕ್ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆ ತುಸು ಹೆಚ್ಚಾದರೂ ಇವುಗಳಿಂದಾಗುವ ಲಾಭ ದೊಡ್ಡದು. ಇದೀಗ ತೆಂಗಿನ ಚಿಪ್ಪಿನ ಬೌಲ್, ಚಮಚ ಹೀಗೆ ಹಲವು ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ನೋಡಲು ಆಕರ್ಷಕವಾಗಿರುವುದಲ್ಲದೇ ಆರೋಗ್ಯ ಹಾಗೂ ಪರಿಸರಕ್ಕೆ ಪೂರಕವಾಗಿದೆ. ಸಾಧ್ಯವಾದಷ್ಟು ಕೈಚೀಲ ಗಳನ್ನು ಬಳಸಿ
ಮಾರುಕಟ್ಟೆಯಲ್ಲಿ ನೀವು ಕೊಂಡುಕೊಳ್ಳುವ ತರಕಾರಿ, ಹಣ್ಣುಗಳು ಇನ್ನಿತರ ನಿತ್ಯ ಬಳಕೆ ವಸ್ತುಗಳ ಸಾಗಾಟಕ್ಕಾಗಿ ಪ್ಲಾಸ್ಟಿಕ್ ಕವರ್‌ಗಳನ್ನು ಕೇಳಿ ಪಡೆಯುವ ಬದಲು ಮನೆಯಿಂದಲೇ ಬಟ್ಟೆ ಕೈಚೀಲಗಳನ್ನು ಕೊಂಡೊಯ್ಯುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದಾಗಿ ಮನೆಯಲ್ಲಿನ ಪ್ಲಾಸ್ಟಿಕ್ ಸಂಗ್ರಹವನ್ನು ದೊಡ್ಡ ಮಟ್ಟದಲ್ಲಿ ತಡೆಯಬಹುದು. ಪ್ಲಾಸ್ಟಿಕ್ ಅಂಶವಿರುವ ಬಟ್ಟೆಗಳ ಬಳಕೆ ಬೇಡ
ಫೈಬರ್ ಅಂಶ ಹೊಂದಿರುವ ವಿವಿಧ ಬಗೆಯ ಬಟ್ಟೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಸಾಧ್ಯವಾದಷ್ಟು ಅವುಗಳ ಬಳಕೆ ಬೇಡ. ಅದರ ಬದಲು ಹತ್ತಿ, ಉಣ್ಣೆಯ ಬಟ್ಟೆಗಳನ್ನೇ ಬಳಸಿದಲ್ಲಿ ಉತ್ತಮ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಮತ್ತು ಶಿಶುಗಳಿಗೆ ಪ್ಲಾಸ್ಟಿಕ್‌ಯುಕ್ತ ಬಟ್ಟೆಗಳನ್ನು ತೊಡಿಸದಿರಿ.
ಇಂದು ಮನೆಯಲ್ಲಿ ಕಾಣಸಿಗುವ ಪೊರಕೆಯಿಂದ ಹಿಡಿದು ಬಾತ್‌ರೂಮ್ ಸ್ವತ್ಛಗೊಳಿಸುವ ಬ್ರಶ್‌ಗಳೂ ಪ್ಲಾಸ್ಟಿಕ್ ವಸ್ತುಗಳೇ ಆಗಿವೆ. ಇವುಗಳ ಬದಲು ತೆಂಗಿನ ಮರದ ಗರಿಗಳಿಂದ ಮಾಡಲ್ಪಟ್ಟ ಪೊರಕೆ, ಬೇಕಿಂಗ್ ಸೋಡ, ಲಿಂಬು ಜ್ಯೂಸ್‌ಗಳನ್ನು ಸ್ವತ್ಛತಾ ಕೆಲಸಗಳಿಗಾಗಿ ಬಳಸಿ. ಪ್ಲಾಸ್ಟಿಕ್‌ನ ಆಲಂಕಾರಿಕ ವಸ್ತುಗಳ ಬಳಕೆ ಬೇಡ
ಮನೆಯಲ್ಲಿ ಬಳಸುವ ಆಲಂಕಾರಿಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಬಳಕೆ ಬೇಡ. ಹಬ್ಬ ಹರಿದಿನಗಳು, ವಿಶೇಷ ಕಾರ್ಯಕ್ರಮಗಳ ಸಂದರ್ಭ ಮನೆಯ ಸಿಂಗಾರಕ್ಕೆ ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳನ್ನೇ ಬಳಸಿ. - ಪ್ರಸನ್ನ ಹೆಗಡೆ ಊರಕೇರಿ