ಮಂಗಳೂರು ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ನಿಷೇಧ ಇದ್ದರೂ ಕೆಲವೊಂದು ಅಂಗಡಿಗಳಲ್ಲಿ ಈ ನಿಯಮಗಳನ್ನು ಪಾಲನೆ ಮಾಡಲಾಗುತ್ತಿಲ್ಲ. ಮಹಾನಗರ ಪಾಲಿಕೆಯು ಇತ್ತೀಚೆಗೆ ನಗರದ ಕೆಲವೊಂದು ಅಂಗಡಿಗಳಿಗೆ ತೆರಳಿ ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲಕರಿಗೆ ದಂಡ ವಿಧಿಸಿತ್ತು. ಆದರೆ, ಇನ್ನೂ ಕೆಲವೊಂದು ಅಂಗಡಿ ಮಾಲಕರು ಎಚ್ಚೆತ್ತುಕೊಂಡಿಲ್ಲ.
ಅನಧಿಕೃತವಾಗಿ ಪ್ಲಾಸ್ಟಿಕ್ ಚೀಲ ಮಾರಾಟ ಮಾಡುವ ಅಂಗಡಿಗಳ ಬಗ್ಗೆ ನಿಗಾ ಇಡಲು ಪಾಲಿಕೆಯು ಈಗಾಗಲೇ ಮೂರು ತಂಡಗಳನ್ನು ರಚನೆ ಮಾಡಿತ್ತು. ಈ ತಂಡದಲ್ಲಿ ಆರೋಗ್ಯ ಅಭಿಯಂತರ, ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು ಇದ್ದಾರೆ. ಅನಧಿಕೃತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗೆ ಈ ತಂಡವು ದಾಳಿ ನಡೆಸಲಿದೆ.
4 ರಿಂದ 5 ಮೈಕ್ರಾನ್ ಪ್ಲಾಸ್ಟಿಕ್ ಚೀಲಗಳ ಮಾರಾಟ ನಿಷೇಧವಿದೆ. ಈ ಪ್ರಮಾಣದ ಪ್ಲಾಸ್ಟಿಕ್‌ಗಳನ್ನು ಯಾವುದೇ ಅಂಗಡಿಗಳಲ್ಲಿ ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿದರೆ ಅಂಗಡಿ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ನಿಯಮ 2015-16ರಲ್ಲಿ ಜಾರಿಗೆ ಬಂದಿದೆ. ಅಲ್ಲದೆ, ಅಂಡಿಗಳಿಗೆ ಪರವಾನಗಿ ನೀಡುವ ವೇಳೆ ಪ್ಲಾಸ್ಟಿಕ್ ಬಳಸಬಾರದೆಂಬ ಸ್ಪಷ್ಟ ನಿಯಮ ಮತ್ತು ಎಚ್ಚರಿಕೆಯನ್ನೂ ಪಾಲಿಕೆ ನೀಡುತ್ತದೆ. ಆದರೆ ಮಂಗಳೂರಿನ ಹೆಚ್ಚಿನ ಅಂಗಡಿ ಮಾಲಕರು ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಿದೆ. ತೆಳು ಪ್ಲಾಸ್ಟಿಕ್‌ನ್ನು ಮರುಬಳಕೆ ಮಾಡಲಾಗುವುದಿಲ್ಲ. ಈ ಅರಿವು ಸಾರ್ವಜನಿಕರಲ್ಲಿಯೇ ಮೂಡಬೇಕಿದೆ. ಇಲ್ಲವಾದರೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಸಾಧ್ಯ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ಮಾಡದಿದ್ದರೆ ಅದಕ್ಕೆ ಪರ್ಯಾಯವಾಗಿ, ಮಾರುಕಟ್ಟೆಯಲ್ಲಿ ಬಟ್ಟೆಯ ಚೀಲ, ಪೇಪರ್ ಚೀಲಗಳು ಸಿಗುತ್ತಿವೆ. ಅದರ ಬಳಕೆ ಹೆಚ್ಚು ಮಾಡಬಹುದುದಾಗಿದೆ.