ಸುರತ್ಕಲ್ : ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನದ ಅಂಗವಾಗಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಪ್ಲಾಸ್ಮಾ ದಾನ ಮಾಡಿ ಉತ್ತಮ ಪಂಕ್ತಿ ಹಾಕಿಕೊಟ್ಟಿದ್ದಾರೆ.
ಸೇವೆಯೇ ಸಂಘಟನೆ ಎನ್ನುವ ಪಕ್ಷದ ಸಿದ್ಧಾಂತದಂತೆ ಸೆಪ್ಟೆಂಬರ್ 14 ರಿಂದ 20 ರ ತನಕ ರಾಷ್ಟ್ರದಲ್ಲಿ ಸೇವಾ ಸಪ್ತಾಹ ಆಚರಿಸಲಾಗುತ್ತದೆ.
ಕೋವಿಡ್ 19 ನೆಗೆಟಿವ್ ಬಂದು ಗುಣಮುಖರಾಗಿರುವ ವ್ಯಕ್ತಿಗಳ ಪ್ಲಾಸ್ಮಾವನ್ನು ಕೋವಿಡ್ 19 ಸೋಂಕಿತರಿಗೆ ನೀಡುವುದರಿಂದ ಸೋಂಕಿತರು ಶೀಘ್ರ ಗುಣಮುಖರಾಗುತ್ತಾರೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರು ಗುರುವಾರ ಪ್ಲಾಸ್ಮಾ ದಾನ ಮಾಡಿದ್ದಾರೆ.
ಪ್ಲಾಸ್ಮಾ ದಾನ ಮಾಡುವ ಮೊದಲು ವೈದ್ಯರು ಪ್ಲಾಸ್ಮಾ ದಾನ ಮಾಡುವ ವ್ಯಕ್ತಿಯನ್ನು ಪರೀಕ್ಷಿಸಿ ಒಪ್ಪಿಗೆ ನೀಡಬೇಕಾಗುತ್ತದೆ. ಡಾ.ಭರತ್ ಶೆಟ್ಟಿಯವರು ಬುಧವಾರ ಈ ಪ್ರಕ್ರಿಯೆಗೆ ಒಳಗಾಗಿದ್ದು ವೈದ್ಯರು ಪ್ಲಾಸ್ಮಾ ದಾನ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ ಇವತ್ತು ಪ್ಲಾಸ್ಮಾ ದಾನ ಮಾಡಿದ್ದಾರೆ.
ಈ ಮೂಲಕ ರಾಜ್ಯದ ಮೊದಲ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾಸಕರ ಈ ನಡೆ ಮೋದಿ ಅಭಿಮಾನಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.